ಬೆಂಗಳೂರು: ನಗರದ ಪ್ರಮುಖ 17 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಲ್ಲಿ ಆತಂಕದ ಮನೆ ಮಾಡಿದೆ.
ಬಸವೇಶ್ವರ ನಗರದ ನ್ಯಾಷಲ್ ಸ್ಕೂಲ್, ವಿದ್ಯಾಶಿಲ್ಪ ಸೇರಿದಂತೆ ಒಟ್ಟ 17ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಯಲಹಂಕದದಲ್ಲಿರುವ ಖಾಸಗಿ ಶಾಲೆ ಒಂದಕ್ಕೂ ಬೆದರಿಕೆಯ ಮೇಲ್ ಬಂದಿದೆ. ಇಂದು ಬೆಳಗ್ಗೆ ಮೇಲ್ ಓಪನ್ ಮಾಡಿದಾಗ ಬೆದರಿಕೆ ಹಾಕಿರೋದು ಕಂಡು ಬಂದಿದೆ.
ಮೇಲ್ ನೋಡಿದ ಶಾಲಾ ಆಡಳಿತ ಮಂಡಳಿ ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನು ಶಾಲೆಯ ಮಕ್ಕಳನ್ನು ತರಗತಿಯಿಂದ ಹೊರಗಡೆ ಕರೆದುಕೊಂಡು ಬರಲಾಗಿದೆ.
ಪೊಲೀಸ್ ಕಮಿಷನರ್ ದಯಾನಂದ್: ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ವಿಚಾರವಾಗಿ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಮಾತನಾಡಿದ್ದು, ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಶಾಲೆಗಳಿಗೆ ಬೆದರಿಕೆ ಕರೆ ಬಂದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಪೊಲೀಸ್ ಕಮಿಷನರ್ ದಯಾನಂದ್, ಶಾಲೆಗಳಿಗೆ ಬಾಂಬ್ ಪತ್ತೆ ದಳ, ನಿಷ್ಕ್ರಿಯ ದಳ ರವಾನಿಸಿದ್ದೇವೆ. ಬೆದರಿಕೆ ಸಂದೇಶ ಬಂದ ಶಾಲೆಗಳಲ್ಲಿ ಪೊಲೀಸರಿಂದ ತಪಾಸಣೆ ನಡೆಸಲಾಗುತ್ತಿದೆ. ಹೀಗಾಗಿ ಯಾವುದೇ ಆತಂಕ ಬೇಡ ಎಂದು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್: ಯಾವುದೇ ಗಾಬರಿ ಬೇಡ. ತಮ್ಮ ಮಕ್ಕಳು ಸುರಕ್ಷಿತವಾಗಿ ಇರ್ತಾರೆ ಎಂದು ಧೈರ್ಯ ತುಂಬಬುತ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಗಾಬರಿಯಾಗ್ಬಿಟ್ಟೆ. ಟಿವಿ ನೋಡ್ತಾ ಇದ್ದೆ ಈ ತರ ಬಂದಿದೆ ಅಂತ ಗೊತ್ತಾಗಿ ನನ್ನ ಸಂಬಂಧಪಟ್ಟ ಶಾಲೆಗಳು, ನನ್ನ ಮನೆಯ ಎದುರುಗಡೆ ಸ್ಕೂಲ್ ಅಂತಾನು ಬರ್ತಾ ಇತ್ತು. ಗಾಬರಿಗೊಂಡು ಹೊರಗಡೆ ಬಂದೆ. ಪೊಲೀಸ್ ಅಧಿಕಾರಿಗಳು ಮೇಲ್ ತೋರಿಸಿದ್ದಾರೆ. ಏನು ಮೇಲ್ ಬಂದಿದೆ ಅಂತ ತೋರಿಸಿದರು. ಇಲ್ಲಿಯವರೆಗೆ ಅದು ಫೇಕ್ ನ್ಯೂಸ್ ಅಂತ ಕಾಣ್ತಾ ಇದೆ. ನಮ್ಮ ಪೊಲೀಸ್ ಅಧಿಕಾರಿಗಳೆಲ್ಲ ಮಾತನಾಡಿದ್ರು. ಆದರೆ ನಾವು ಜಾಗರೂಕರಾಗಿರಬೇಕು. ಪೋಷಕರು ಕೂಡ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.
ಸೈಬರ್ ಕ್ರೈಮ್ ಪೊಲೀಸರು ಆ್ಯಕ್ಟೀವ್ ಆಗಿದ್ದಾರೆ. ಪೊಲೀಸರು ವೇಗವಾಗಿ ಎಲ್ಲರಿಗೂ ಕಮ್ಯುನಿಕೇಟ್ ಮಾಡಿದ್ದಾರೆ. ಸಂಬಂಧಪಟ್ಟ ಶಾಲೆಗಳಿಂದ ಕೂಡ ನನಗೆ ಕರೆ ಬಂದಿವೆ. ನಮ್ಮ ಮನೆ ಮುಂದೆ ಕೂಡ ಪೊಲಿಸರು ತಕ್ಷಣ ಬಂದು ತಪಾಸಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.