ಬೆಂಗಳೂರು: ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿಯೂ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿದರೆ, ಅವರ ಬೇಡಿಕೆಗಳನ್ನು ಈಡೇರಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೊಡ್ಡವರಾಗುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಸೇವಾ ಭದ್ರತೆಗೆ ಆಗ್ರಹಿಸಿ ರಾಜ್ಯ ಅತಿಥಿ ಉಪನ್ಯಾಸಕರ ಸಂಘವು ಬುಧವಾರ ನೆಲಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ನಡೆಸಿದ ಪಾದಯಾತ್ರೆ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸುವ ಮೂಲಕ ಮಾತನಾಡಿದರು.
ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 2019ರಲ್ಲಿ ಗುತ್ತಿಗೆ, ಅರೆಗುತ್ತಿಗೆ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ 19 ಸಾವಿರಕ್ಕೂ ಹೆಚ್ಚು ಉಪನ್ಯಾಸಕರ ಉದ್ಯೋಗವನ್ನು ಕಾಯಂ ಮಾಡುವ ಮೂಲಕ ಸೇವಾ ಭದ್ರತೆ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ಇನ್ನು ದೆಹಲಿಯಲ್ಲಿ ಇದು ಸಾಧ್ಯವಾಗಿರುವಂತದ್ದು ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ? 11 ಸಾವಿರ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವ ಆರ್ಥಿಕ ಶಕ್ತಿ ರಾಜ್ಯ ಸರ್ಕಾರಕ್ಕಿಲ್ಲವೇ ಎಂದು ಪ್ರಶ್ನಿಸಿದರು.
ಹರಿಯಾಣದಲ್ಲೂ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಲಾಗಿದೆ. ಪಂಜಾಬ್ನಲ್ಲಿಯೂ ಈ ನಿಟ್ಟಿನಲ್ಲಿ ಪ್ರಮುಖ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಭ್ರಷ್ಟಾಚಾರವನ್ನು ನಿಯಂತ್ರಿಸಿದರೆ ಕರ್ನಾಟಕದಲ್ಲಿಯೂ ಸಾಧ್ಯವಾಗಲಿದೆ ಎಂದರು.
ಅತಿಥಿ ಉಪನ್ಯಾಸಕರು ದಕ್ಷತೆಯಿಂದ ಕೆಲಸ ಮಾಡಿದ್ದಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಕ್ಕುಗಳ ಬಗ್ಗೆ ತಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ. ಇದು ಹತ್ತಾರು ವರ್ಷಗಳಿಂದ ಇರುವ ಸಮಸ್ಯೆ. ಅವರ ಭವಿಷ್ಯದ ಸಮಸ್ಯೆ. ಅವರ ಮಕ್ಕಳ ಬದುಕಿನ ಸಮಸ್ಯೆ. ನಿಯಮಗಳ ಪ್ರಕಾರ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಕೈಚೆಲ್ಲುವುದರಲ್ಲಿ ಅರ್ಥವಿಲ್ಲ. ಕಾನೂನು, ನೀತಿ, ನಿಯಮಗಳು ಸಮಾಜದ ಹಿತದೃಷ್ಟಿಗೆ ಅನುಗುಣವಾಗಿರಬೇಕು. ಸಾಧ್ಯವಿಲ್ಲ ಎನ್ನುವುದು ಉತ್ತರವಲ್ಲ, ಸಾಧ್ಯವಾಗಿಸುವುದು ಉತ್ತರವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಿಂದ ಸಾಗಿದ ಪಾದಯಾತ್ರೆಯಲ್ಲಿ ಪಕ್ಷದ ಯುವ ಘಟಕದ ಅಧ್ಯಕ್ಷ ಲೋಹಿತ್ ಹನುಮಾಪುರ, ಸಂಘಟನಾ ಕಾರ್ಯದರ್ಶಿ ಜಗದೀಶ್ ಚಂದ್ರ ಸೇರಿದಂತೆ ರವಿಕುಮಾರ್ ,ದರ್ಶನ್ ಜೈನ್, ರಾಮಕೃಷ್ಣಪ್ಪ ಹಲವು ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.