ನ್ಯೂಡೆಲ್ಲ: ಲಿಕ್ಕರ್ ಹಗರಣದ ಮನಿ ಲ್ಯಾಂಡರಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೆ ಡೋಂಟ್ ಕೇರ್ ಎಂದಿದ್ದಾರೆ.
ಇಡಿ ಅಧಿಕಾರಿಗಳು ಕೇಜ್ರಿವಾಲ್ಗೆ ನೀಡುತ್ತಿರುವ 3ನೇ ನೋಟಿಸ್ ಇದಾಗಿದೆ. ಈ ಮೊದಲು ನವೆಂಬರ್ 2, ಡಿಸೆಂಬರ್ 21 ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆದರೆ ಕೇಜ್ರಿವಾಲ್, ವಿಚಾರಣೆಗೆ ಹಾಜರಾಗಲಿಲ್ಲ. ಈಗ ಮತ್ತೆ ಇಡಿ ನೀಡಿದ್ದ ಮೂರನೇ ಸಮನ್ಸ್ಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಜರಾಗುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷ ಸ್ಪಷ್ಟಪಡಿಸಿದೆ.
ಮೂರನೇ ಬಾರಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ಅದರಂತೆ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಬೇಕಾಗಿತ್ತು. ಜಾರಿ ನಿರ್ದೇಶನಾಲಯದ ವಿರುದ್ಧ ವಾಗ್ದಾಳಿ ನಡೆಸಿರುವ ಆಪ್, ಕೇಜ್ರಿವಾಲ್ಗೆ ಕಾನೂನು ಬಾಹಿರವಾಗಿ ನೋಟಿಸ್ ನೀಡಿದ್ದಾರೆ. ಅವರನ್ನು ಬಂಧಿಸಲು ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿದೆ.
ಚುನಾವಣೆ ಹತ್ತಿರ ಇದ್ದಾಗ ಯಾಕೆ ನೋಟಿಸ್ ನೀಡಿದ್ದಾರೆ. ನೋಟಿಸ್ನ ಉದ್ದೇಶ ಚುನಾವಣೆಯಲ್ಲಿ ಕೇಜ್ರಿವಾಲ್ ಪ್ರಚಾರ ಮಾಡೋದನ್ನು ನಿಲ್ಲಿಸುವುದಾಗಿದೆ. ಇದು ಬಿಜೆಪಿ ಮಾಡುತ್ತಿರುವ ಕಿತಾಪತಿ ಎಂದು ಆಪ್ ವಾಗ್ದಾಳಿ ನಡೆಸಿದೆ.