ರಾಯಚೂರು: ಹಳ್ಳಿಗಳಿಂದ ನಗರಕ್ಕೆ ಉದ್ಯೋಗ ಅರಸಿ ಬರಬಾರದು ಎಂಬ ದೂರದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ 15 ವರ್ಷಗಳ ಹಿಂದೆ ತಂದಿರುವ ನರೇಗಾ ಯೋಜನೆಯಡಿ ಪ್ರತಿ ವರ್ಷ ರಾಜ್ಯದಲ್ಲಿ ಸಾವಿರಾರು ಕೋಟಿ ರೂ.ಗಳ ಅವ್ಯವಹಾರ ನಡೆಯುತ್ತಿರುವುದು ಗೌಪ್ಯವಾಗೇನು ಉಳಿದಿಲ್ಲ. ಈ ರೀತಿ ಅಕ್ರಮ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದು ಜನರೇ ಹೇಳುತ್ತಿರುತ್ತಾರೆ.
ಇನ್ನು ಈ ರೀತಿ ಅಕ್ರಮ ಎಸಗುವವರನ್ನು ಕೆಸದಿಂದಲೇ ವಜಾ ಮಾಡಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಲೇ ಇವೆ. ಆದರೆ, ಅಲೊಂದು ಇಲ್ಲೊಂದು ಎಂಬಂತೆ ಕೆಲವರನ್ನು ಮಾತ್ರ ಅಮಾನತು ಮಾಡಿ ಮತ್ತೆ ಭ್ರಷ್ಟರಿಗೆ ಬೇರೆ ಜಾಗ ತೋರಿಸಿ ವರ್ಗಾವಣೆ ಮಾಡುವುದು ಸಾಮಾನ್ಯವಾಗಿದೆ. ಅಂದರೆ ಭ್ರಷ್ಟರಿಗೆ ಶಿಕ್ಷೆ ಆಗಿರುವುದು ಮಾತ್ರ ತೀರಾ ಕಡಿಮೆಯೇ.
ಅದೇ ರೀತಿ ದಕ್ಷ ಅಧಿಕಾರಿಯೊಬ್ಬರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ 32 ಮಂದಿ ಭ್ರಷ್ಟ ಪಿಡಿಒಗಳು ಎಸಗಿದ ಅಕ್ರಮದ ವಿರುದ್ಧ ಕೆಂಡಮಂಡಲರಾಗಿದ್ದು, 32 ಪಿಡಿಒಗಳನ್ನು ಅಮಾನತು ಮಾಡಿದ್ದಾರೆ.
ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಒ ಪಾಂಡೆ ರಾಹುಲ್ ತುಕಾರಾಂ ಅವರೇ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದು, ನೀಚರ ನಿದ್ದೆಗೆಡಿಸಿರುವವರು. ದೇವದುರ್ಗ ತಾಲೂಕಿನ 32 ಮಂದಿ ಭ್ರಷ್ಟ ಪಿಡಿಒಗಳು ನರೇಗಾ ಯೋಜನೆಯಡಿ 150 ಕೋಟಿ ರೂ.ಗೂ ಅಧಿಕ ಹಣ ಅಕ್ರಮ ಬಳಕೆ ಮಾಡಿರುವುದು ಸಾಬೀತಾದ ಹಿನ್ನೆಲೆ ಈ ಎಲ್ಲರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 2020-21 ರಿಂದ 2022-23ರ ಸಾಲಿನ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದವು. ಲೆಕ್ಕ ಪರಿಶೋಧನಾ ಸಮಿತಿ ತನಿಖೆ ವೇಳೆ ಭ್ರಷ್ಟಾಚಾರ ನಡೆದಿರುವುದು ಖಚಿತವಾಗಿದೆ. ಈ ಹಿನ್ನೆಲೆ ಜಿಲ್ಲೆಯ 32 ಪಿಡಿಒಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದೇವದುರ್ಗ ತಾಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ, ಇದಕ್ಕೆ ಸಂಬಂಧಿಸಿ 32 ಪಿಡಿಒಗಳನ್ನು ಅಮಾನತು ಮಾಡಲಾಗಿದೆ ಎಂದು ರಾಯಚೂರು ಜಿಪಂ ಸಿಇಒ ಪಾಂಡೆ ರಾಹುಲ್ ತುಕಾರಾಂ ವಿವರಿಸಿದ್ದಾರೆ.
ಇನ್ನು ಈ ಪೈಕಿ ನಮ್ಮ ಜಿಲ್ಲೆಯಲ್ಲಿರುವ 27 ಪಿಡಿಒಗಳನ್ನು ನೇರ ಅಮಾನತು ಮಾಡಲಾಗಿದ್ದು ಉಳಿದ 5 ಮಂದಿಯನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ನಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಅಕ್ರಮ ಎಸಗಿರುವ ಬಗ್ಗೆ ಮುಂದಿನ ದಿನಗಳಲ್ಲಿ ದೂರುಗಳು ಬಂದರೆ ಪರಿಶೀಲಿಸಿ ಅಂಥ ಭ್ರಷ್ಟ ಪಿಡಿಒಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.