ಬೆಂಗಳೂರು: ಕನಿಷ್ಠ ಹೆಚ್ಚುವರಿ ಪಿಂಚಣಿಗಾಗಿ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮೆಂಡರ್ ಅಶೋಕ್ ರಾಹುತ್ ಹಾಗೂ ಇತರೆ ಮುಖಂಡರು, ನೂರಾರು ನಿವೃತ್ತರೊಂದಿಗೆ ದೆಹಲಿಯ ಜಂತರ್ ಮಂತರ್ನಲ್ಲಿ ಕೈಗೊಂಡಿರುವ ಧರಣಿ ಉಪವಾಸ ಸತ್ಯಾಗ್ರಹ ಈ ಬಾರಿ ತಾರ್ಕಿಕ ಅಂತ್ಯ ಕಾಣಲಿದ್ದು, ಏನೇ ಆಗಲಿ ಜಯ ಶತಸಿದ್ಧ ಎಂದು ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘಟನೆ ಕಾರ್ಯಧ್ಯಕ್ಷ ನಂಜುಂಡೇಗೌಡ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.
ಲಾಲ್ಬಾಗ್ ಆವರಣದಲ್ಲಿ ಭಾನುವಾರ ಜರುಗಿದ ಇಪಿಎಸ್ ಪಿಂಚಣಿದಾರರ 73ನೇ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಪಾರ್ಲಿಮೆಂಟ್ ಅಧಿವೇಶನ ಇನ್ನೂ ಮುಗಿದಿಲ್ಲ. ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರು (minister for labour & employment) ನಮ್ಮ ಮುಖಂಡರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಅಗ್ರಹಿಸಿದರು.
ದೆಹಲಿಯಲ್ಲಿ ನಡೆಯುವ ಉಪವಾಸ ಸತ್ಯಾಗ್ರಹವನ್ನು ಪ್ರತಿಯೊಂದು ರಾಜ್ಯಕ್ಕೂ ಒಂದೊಂದು ದಿನ ನಿಗದಿಪಡಿಸಿದ್ದು, ನಮ್ಮ ರಾಜ್ಯಕ್ಕೆ ಫೆಬ್ರವರಿ 15 ಆಗಿದೆ. ಆ ದಿನ ಬೆಳಗ್ಗೆ 11 ಗಂಟೆಗೆ ನಮ್ಮ ಮುಖಂಡರನ್ನು ಬೆಂಬಲಸಿ, ಕೇಂದ್ರ ಸರ್ಕಾರದ ಗಮನ ಸೆಳೆಯುವ ಸಲುವಾಗಿ, ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು. ಮಾಸಿಕ ಸಭೆಯಲ್ಲಿ ಅಧಿಕ ಪಿಂಚಣಿ ಹಾಗೂ ಕನಿಷ್ಠ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ ಸದಸ್ಯರ ಜೊತೆ ವಿಸ್ಕೃತ ಚರ್ಚೆ ನಡೆಸಲಾಯಿತು.
ಉಪಾಧ್ಯಕ್ಷ ಸುಬ್ಬಣ್ಣ ಮಾತನಾಡಿ, ದೆಹಲಿಯಲ್ಲಿ ನಮ್ಮ ಮುಖಂಡರು ಚಳಿ, ಮಳೆ ಯಾವುದನ್ನು ಲೆಕ್ಕಿಸದೆ, ಉಪವಾಸ ಮುಷ್ಕರ ನಿರತರಾಗಿದ್ದು, ಇವರ ಆರೋಗ್ಯ ವೃದ್ಧಿಸಲಿ ಹಾಗೂ ಹೆಚ್ಚಿನ ಶಕ್ತಿ ನೀಡಲಿ ಎಂದು ಸಭೆಯಲ್ಲಿ ಪ್ರಸ್ತಾಪಿಸಿದ್ದು, ಸದಸ್ಯರು ಒಕ್ಕೂರಲಿನಿಂದ ನಮ್ಮ ಮುಖಂಡರಿಗೆ ಶುಭ ಹಾರೈಸಿದರು. ಹೆಚ್ಚುವರಿ ಪಿಂಚಣಿ ಕೋರಿ ಅರ್ಜಿ ಸಲ್ಲಿಸಿರುವ ಸದಸ್ಯರು, ಅರ್ಜಿಯನ್ನು ವೆಬ್ ಸೈಟ್ ನಲ್ಲಿ ಪರಿಶೀಲಿಸಿ, ಏನಾದರೂ ದೋಷ ಕಂಡುಬಂದಲ್ಲಿ, ಕೂಡಲೇ ಅವರು ಪಿಎಫ್ ಕಚೇರಿಗೆ ಭೇಟಿ ನೀಡಿ, ಅದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಪಾರ್ಲಿಮೆಂಟ್ ಅಧಿವೇಶನದಲ್ಲಿ ನಿವೃತ್ತರ ಬೇಡಿಕೆಗಳ ಬಗ್ಗೆ ಮಂಡನೆಯೇ ಆಗಿಲ್ಲವೆಂದು ತಿಳಿದು ಮತ್ತಷ್ಟು ಕುಗ್ಗಿ ಹೋಗಿದ್ದು, ಒಂದು ಕಡೆ ಕೇಂದ್ರ ಸರ್ಕಾರ ನಿವೃತ್ತರ ಬಗ್ಗೆ ತಳೆದಿರುವ ನಿರ್ಲಿಪ್ತತೆ, ಮತ್ತೊಂದು ಕಡೆ ತಮ್ಮ ಬದುಕಿನ ಆಶಾಕಿರಣ ಚಿಗುರೊಡೆಯಬಹುದು ಎಂಬ ತಮ್ಮ ಮನದಾಳದ ಇಂಗಿತವನ್ನು ಸ್ನೇಹಿತರಲ್ಲಿ ಹಂಚಿಕೊಳ್ಳುತ್ತಿದ್ದದ್ದು, ಸಾಮಾನ್ಯ ದೃಶ್ಯಾವಳಿಯಾಗಿತ್ತು.
ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪನವರು ಇಂದಿನ ಸಭೆಗೆ ಆಗಮಿಸಿದ್ದ ಎಲ್ಲ ಸದಸ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಒಟ್ಟಾರೆ, ಸಭೆಯಲ್ಲಿ ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸಿ, ನಿರ್ಣಯಿಸಲಾಯಿತು. ಸಭೆಯ ನಿರ್ವಹಣೆಯನ್ನು ಪದಾಧಿಕಾರಿಗಳಾದ ನಾಗರಾಜು ಹಾಗೂ ಮನೋಹರ್ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.