ಅಬುದಾಬಿ: ಹೊಸ ಕೃಷಿ ಒಪ್ಪಂದಗಳಿಗೆ ಅವಕಾಶ ಬೇಡ, ವಿಶ್ವ ವ್ಯಾಪಾರ ಒಪ್ಪಂದದಿಂದ ಅಗಿರುವ ರೈತರ ಸಂಕಷ್ಟ, ಸಮಸ್ಯೆ ಬಗ್ಗೆ ಸಮೀಕ್ಷೆ ಮಾಡಬೇಕು, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸಿವಿಲ್ ಸೊಸೈಟಿ ಸಂಘಟನೆ ಒತ್ತಾಯಿಸಿದೆ.
ಅಬುದಾಬಿಯಲ್ಲಿ ನಡೆಯುತ್ತಿರುವ ವಿಶ್ವವ್ಯಾಪಾರ ಸಂಸ್ಥೆ, ಮುಕ್ತ ವ್ಯಾಪಾರ ಒಪ್ಪಂದ ಸಮಾವೇಶದಲ್ಲಿ ಪ್ರಪಂಚದ ಐವತ್ತಕ್ಕೂ ಹೆಚ್ಚು ಸಿವಿಲ್ ಸೊಸೈಟಿಯ 21 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಡೈರೆಕ್ಟರ್ ಇಂಟರ್ನ್ಯಾಷನಲ್ ಪ್ರೋಗ್ರಾಮ್ ಸೆಂಟರ್ ಯುಎಸ್ಎ ಮುಖ್ಯಸ್ಥ ದೇಬುರ್ ಜೇಮ್ಸ್ ನೇತೃತ್ವದಲ್ಲಿ ಈ ಒತ್ತಾಯ ಮಾಡಲಾಯಿತು.
ಹಲವು ದೇಶಗಳು WTO ಒಪ್ಪಂದ ನಿಯಮ ಉಲ್ಲಂಘಿಸಿದ್ದಾರೆ. ಅದರೆ ಭಾರತ ದೇಶವನ್ನು ಗುರಿಯಾಗಿರಿಸಿಕೊಂಡು ದೊಡ್ಡ ಕಂಪನಿಗಳು ಲಾಬಿ ಮಾಡುತ್ತಿವೆ ಎಂದು ಸಭೆಯ ಗಮನ ಸೆಳೆಯಲಾಯಿತು.
ರೈತ ಸಂಘಟನೆಗಳು ಕೃಷಿಗೆ ಮಾರಕವಾಗಿರುವ ವಿಶ್ವ ವ್ಯಾಪಾರ ಸಂಸ್ಥೆಯ ಮುಕ್ತ ವ್ಯಾಪಾರ ಒಪ್ಪಂದಗಳನ್ನು ವಿರೋಧಿಸಲು ಪ್ರಮುಖ ಕಾರಣಗಳು: WTO ಸ್ಥಳೀಯ ರೈತರ ಮಾರುಕಟ್ಟೆಯನ್ನು ನಾಶಪಡಿಸುವ ಮೂಲಕ ಅಸಮಾನತೆ ಮತ್ತು ಗ್ರಾಮೀಣ ಸಾಲವನ್ನು ಹೆಚ್ಚಿಸುತ್ತದೆ. ವಿದೇಶದಲ್ಲಿ ಹೆಚ್ಚು ಸಬ್ಸಿಡಿ ನೀಡುವ ಮೂಲಕ ಉತ್ಪಾದಿಸಿದ ಕೃಷಿ ಉತ್ಪನ್ನಗಳನ್ನು ಮುಕ್ತ ಆಮದು ನೀತಿಯ ಕಾರಣದಿಂದ ದೇಶೀಯ ರೈತರ ಉತ್ಪನ್ನಗಳ ಬೆಲೆಗಳು ಕುಸಿಯುತ್ತಿವೆ.
ವಿಶ್ವ ವ್ಯಾಪಾರ ಸಂಸ್ಥೆಯು ಬೃಹತ್ ಕೃಷಿ ಉದ್ಯಮಗಳಿಗೆ ಅನುಕೂಲವಾಗುವಂತಹ ಮುಕ್ತ ವ್ಯಾಪಾರ ನೀತಿಯನ್ನು ಸೃಷ್ಟಿಸುವುದರೊಂದಿಗೆ ಅವುಗಳು ದೊಡ್ಡ ಮೊತ್ತದ ಸಬ್ಸಿಡಿಗಳನ್ನು ಪಡೆದು ಅಗ್ಗದ ಆಹಾರ ಪದಾರ್ಥಗಳನ್ನು ಆರ್ಥಿಕವಾಗಿ ದುರ್ಬಲವಾದ ರಾಷ್ಟ್ರಗಳಲ್ಲಿ ಸುರಿಯುವ/ಎಸೆಯುವ ಸ್ವಾತಂತ್ರವನ್ನು ನೀಡಿದೆ.
ಈ ಕ್ರಮವು ಒಂದು ಕಡೆ ಸ್ಥಳೀಯ ಮಾರುಕಟ್ಟೆ ಬೆಲೆಗಳನ್ನು ಕುಸಿಯುವಂತೆ ಮಾಡಿ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಗ್ರಾಮೀಣ ಪ್ರದೇಶದ ಸಾಲವನ್ನು ಹೆಚ್ಚಿಸುವುದರ ಮುಖಾಂತರ ರೈತರನ್ನು ಸಂಕಷ್ಟಕ್ಕೆ ತಳ್ಳಿ, ಮತ್ತೊಂದು ಕಡೆ ಬೃಹತ್ ಉದ್ಯಮಗಳ ಸಂಪತ್ತನ್ನು ಹೆಚ್ಚಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ. ಇದರ ಪರಿಣಾಮ, ವಿಶ್ವದ ಸಂಪತ್ತಿನ 82 ಪಟ್ಟು ಕೇವಲ 1 ರಷ್ಟು ಜನಗಳ ಕೈಯಲ್ಲಿ ಇರುವಂತಹ ಅಸಮಾನತೆಯನ್ನು ಸೃಷ್ಟಿಸಿದೆ.
ಜಾಗತಿಕ ಆಹಾರ ವ್ಯವಸ್ಥೆಯನ್ನು ಕೇವಲ ಕೆಲವೇ ಕಂಪನಿಗಳು ನಿಯಂತ್ರಿಸುತ್ತಿವೆ: ಸುಮಾರು ಇಪ್ಪತ್ತಕ್ಕಿಂತ ಕಡಿಮೆ ಸಂಖ್ಯೆಯ ಜಾಗತಿಕ ಉದ್ದಿಮೆಗಳು ಇಂದು ನಾವು ಯಾವ ಆಹಾರವನ್ನು ಸೇವಿಸುತ್ತೇವೆ, ಅದನ್ನು ಹೇಗೆ ಖರೀದಿಸುತ್ತೇವೆ ಎಂಬ ಜಾಗತಿಕ ಆಹಾರ ಸರಪಳಿಯನ್ನು ನಿಯಂತ್ರಿಸುತ್ತಿವೆ. ಜಗತ್ತಿನ ಬೀಜ ಮಾರುಕಟ್ಟೆಯ ಶೇ.50ಕ್ಕಿಂತ ಹೆಚ್ಚಿನ ಭಾಗವನ್ನು ಕೇವಲ ಮೂರು ದೊಡ್ಡ ಕಂಪನಿಗಳು ನಿಯಂತ್ರಿಸುತ್ತಿವೆ.
ಜಾನುವಾರುಗಳ ಸಾಕಾಣೆ ಮತ್ತು ಅಭಿವೃದ್ದಿಯಲ್ಲಿ ತೊಡಗಿರುವ ಅಗ್ರ ಸ್ಥಾನದಲ್ಲಿರುವ ನಾಲ್ಕು ಕಂಪನಿಗಳು ಶೇ.99ರಷ್ಟು ಮಾರುಕಟ್ಟೆ ನಿಯಂತ್ರಣವನ್ನು ಹೊಂದಿವೆ. ಕೇವಲ ಹತ್ತು ಕಂಪನಿಗಳು ಜಾಗತಿಕ ರಸಗೊಬ್ಬರ ಮಾರುಕಟ್ಟೆಯ ಶೇ.55ಕ್ಕಿಂತ ಜಾಸ್ತಿ ನಿಯಂತ್ರಣವನ್ನು ಹೊಂದಿವೆ.
4 ವ್ಯಾಪಾರಿಗಳು ವಿಶ್ವ ಧಾನ್ಯ ಮತ್ತು ಸೋಯಾ ಮಾರುಕಟ್ಟೆಯಲ್ಲಿ ಸುಮಾರು ಶೇ.75ರಷ್ಟು ನಿಯಂತ್ರಿಸುತ್ತಾರೆ. ಕೇವಲ 11 ಕಂಪನಿಗಳು ಶೇ.30 ರಷ್ಟು ಆಹಾರ ಸಂಸ್ಕರಣೆಯನ್ನು ನಿಯಂತ್ರಿಸುತ್ತಿವೆ. ಇದು ಎಲ್ಲವನ್ನು ಏಕೀಕರಿಸುವ ಮತ್ತು ಸಣ್ಣ ರೈತರು ಮತ್ತು ಬಡ ರಾಷ್ಟ್ರಗಳನ್ನು ನಿಯಂತ್ರಿಸುವ ತಂತ್ರವಾಗಿದೆ.
ಮುಕ್ತ ವ್ಯಾಪಾರ ಒಪ್ಪಂದಗಳು ಖಾಸಗಿ ಕಂಪನಿಗಳಿಗೆ ಬೀಜ ಮತ್ತು ಜೀವ ವೈವಿಧ್ಯಗಳನ್ನು ಪೇಟೆಂಟ್ ಮಾಡಲು ಅನುವು ಮಾಡಿಕೊಡುವ ಮೂಲಕ ಹತ್ತು ಸಾವಿರ ವರ್ಷಗಳ ಹಳೆಯ ಆಹಾರ ವ್ಯವಸ್ಥೆಯನ್ನು ಅಪರಾಧೀಕರಿಸುತ್ತವೆ.
ಬೀಜವು ಸೃಷ್ಟಿಯ ಮೂಲ ಆಧಾರವಾಗಿದೆ. ವಿಶ್ವ ವ್ಯಾಪಾರ ಸಂಸ್ಥೆ ಮತ್ತು ಇತರೆ ಮುಕ್ತ ವ್ಯಾಪಾರ ಒಪ್ಪಂದಗಳು ಖಾಸಗಿ ಕಂಪನಿಗಳಿಗೆ ಬೀಜಗಳನ್ನು ಪೇಟೆಂಟ್ ಮಾಡಿಕೊಳ್ಳಲು ಅನುಕೂಲಕರವಾಗುವಂತಹ ಅಂತರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕುವಂತೆ ತನ್ನ ಸದಸ್ಯ ರಾಷ್ಟ್ರಗಳಿಗೆ, ಬಹುಮುಖ್ಯವಾಗಿ ಬಡ ಹಾಗು ಹಿಂದುಳಿದ ರಾಷ್ಟ್ರಗಳಿಗೆ, ಬಲವಂತವಾಗಿ, ಕೆಲವೊಮ್ಮೆ ಬೆದರಿಕೆ ಒಡ್ದುತ್ತವೆ.
ಇಂದು ಎಷ್ಟೋ ದೇಶಗಳಲ್ಲಿ ರೈತರು ತಾವು ಬೆಳೆದ ತಮ್ಮ ಆಯ್ಕೆಯ ಬೀಜಗಳನ್ನು ಉಪಯೋಗಿಸುವುದು ಮತ್ತು ಮರುಬಳಕೆ ಮಾಡುವುದನ್ನು ಅಪರಾಧೀಕರಿಸಿದೆ. ಕೆಲವು ಸರ್ಕಾರಗಳು ಈ ವ್ಯವಸ್ಥೆಯನ್ನು ವಿರೋಧಿಸಿದರೂ, ಈ ಮುಕ್ತ ವ್ಯಾಪಾರ ನೀತಿಗಳು ರಾಷ್ಟ್ರೀಯ ಕಾನೂನುಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಮೀರಿ ಹೂಡಿಕೆದಾರರು ರಾಷ್ಟ್ರೀಯ ಸರ್ಕಾರಗಳ ವಿರುದ್ದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಅವಕಾಶ ಮಾಡಿಕೊಡುತ್ತವೆ.
ಕೈಗಾರಿಕ ಕೃಷಿಯು ಭೂಮಿಯ ತಾಪಮಾನವನ್ನು ಹೆಚ್ಚಿಸುತ್ತಿದೆ: ಕೈಗಾರಿಕ ಕೃಷಿ ಮತ್ತು ಸಂಬಂಧಿತ ಭೂಮಿ ಬಳಕೆ ಗ್ರೀನ್ ಹೌಸ್ ಗ್ಯಾಸ್ ಹೊರಸೂಸುವಿಕೆಯ ಪ್ರಮಾಣದಲ್ಲಿ 30% ಕೊಡುಗೆ ನೀಡುತ್ತದೆ. ಇದು ತೀವ್ರ ಹವಾಮಾನ ವೈಪರೀತ್ಯಗಳನ್ನು ಸೃಷ್ಟಿಸುವುದರ ಮೂಲಕ ಮುಖ್ಯವಾಗಿ ಕೃಷಿ ಮತ್ತು ಕೃಷಿಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ವಿಶ್ವ ವ್ಯಾಪಾರ ಸಂಸ್ಥೆ ಮತ್ತು ಇತರೆ ಮುಕ್ತ ವ್ಯಾಪಾರ ಒಪ್ಪಂದಗಳು ರೈತರನ್ನು ಬಲಿ ತೆಗೆದುಕೊಳ್ಳುತ್ತವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಭಾರತ ದೇಶ ಒಂದರಲ್ಲೆ ಕೃಷಿ ಬಿಕ್ಕಟ್ಟು, ವೈಫಲ್ಯ ಮತ್ತು ಸಾಲಭಾದೆ ಕಾರಣಗಳಿಂದ ಸುಮಾರು 3 ಲಕ್ಷಕ್ಕೂ ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಈಗ ಜಗತ್ತಿನಾದ್ಯಂತ ಕಂಡುಬರುವ ವಿದ್ಯಮಾನವಾಗಿದೆ.
ಕೃಷಿಯನ್ನು ಮುಕ್ತ ವ್ಯಾಪಾರ ಒಪ್ಪಂದಗಳ ಮಾತುಕತೆಗಳಿಂದ ಹೊರಗಿರಿಸಿರಿ!: ನಮಗೆ ಆಹಾರ ಸಾರ್ವಭೌಮತ್ವ ಬೇಕೇ ಹೊರತು ಮುಕ್ತ ವ್ಯಾಪಾರವಲ್ಲ! ಎಂಬುದು ನಮ್ಮ ಹೋರಾಟದ ಮಾರ್ಗವಾಗಿದೆ ಎಂದು ಅಬುದಾಬಿಯಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ವಿಶ್ವ ವ್ಯಾಪಾರ ಒಪ್ಪಂದ ಸಂಸ್ಥೆಯ ಸಮಾವೇಶದಲ್ಲಿ ನೂರಾರು ದೇಶಗಳ ರೈತ ಪ್ರತಿನಿಧಿಗಳು, ಎನ್ಜಿಒಗಳ ಒಕ್ಕೂಟ,ಗಳನ್ನು ಪ್ರತಿನಿಧಿಸಿ ಸಭೆಯ ಗಮನ ಸೆಳೆದಿದ್ದೇವೆ ಎಂದು ಡಬ್ಲ್ಯೂ ಟಿ ಓ ಸಭೆಯಲ್ಲಿ ಭಾಗವಹಿಸಿರುವ ರೈತ ಮುಖಂಡ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ
ವಿಶ್ವ ವ್ಯಾಪಾರ ಒಪ್ಪಂದ ಸಂಸ್ಥೆಯ ಸಚಿವಾಲಯದ ಸಮಾವೇಶ ಫೆ, 26 ರಿಂದ ಆಬುದಾಬಿಯಲ್ಲಿ ನಡೆಯುತಿದೆ, ಕೃಷಿ ಕ್ಷೇತ್ರದ ರೈತರ ಸಮಸ್ಯೆಯ ಬಗ್ಗೆ ಚರ್ಚಿಸುವ ಸಲುವಾಗಿ ಭಾರತ ಧೇಶದ ಪರವಾಗಿ ಸಂಯುಕ್ತ ಕಿಸಾನ್ ಮೋರ್ಚ ದಕ್ಷಿಣ ಭಾರತ ಸಂಚಾಲಕ ರೈತಮುಖಂಡ ಕುರುಬೂರ್ ಶಾಂತಕುಮಾರ, ಕೇರಳದ ಕೆ.ವಿ. ಬಿಜು,ತೆಲಂಗಾಣದ ನರಸಿಂಹನಾಯ್ಡು, ದೆಹಲಿಯ ರಂಜಸೇನ್ ಗುಪ್ತ, ಗೋವಾದ ಮೀನುಗಾರಿಕೆ ಮಹಮಂಡಲದ ಅಲೇನಿಸೂಸಿಮೂಸ್, ದೆಹಲಿಯ ಅಬಿಜೀಷದಾಸ್ ಗುಪ್ತ, ಪಾರಮಿಂದರ್ ಜೀತಸಿಂಗ್, ಸ್ವದೇಶಿ ಜಾಗರಣ ಮಂಚ್ ಅಶ್ವಿನಿ ಮಹಾಜನ್ ಭಾರತ ದೇಶದ ಪ್ರತಿನಿದಿಗಳಾಗಿ, ಮತ್ತಿತರ ದೇಶದ ಪ್ರತಿನಿಧಿಗಳು ಭಾಗವಹಿಸಿದರು,