ಪಿರಿಯಾಪಟ್ಟಣ: ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ದೇಶದಲ್ಲಿ 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಾದ ಅಗತ್ಯವಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ತಾಲೂಕಿನ ನವಿಲೂರು ಗ್ರಾಮದಲ್ಲಿ ಅಂಬೇಡ್ಕರ್ ಯುವಕರ ಸಂಘ ನಿರ್ಮಿಸಿರುವ ಅಂಬೇಡ್ಕರ್ ಹಾಗೂ ತಥಾಗತ ಗೌತಮ ಬುದ್ಧನ ಪ್ರತಿಮೆಗಳ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಸಮಾಜದ ಪ್ರೇರಣಾ ಶಕ್ತಿಯಾಗಿ ಎಲ್ಲ ವರ್ಗದ ಜನರಿಗೂ ಸಮಾನವಾದ ಹಕ್ಕುಗಳನ್ನು ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಇತ್ತೀಚೆಗೆ ಮತೀಯ ಶಕ್ತಿಗಳು ವ್ಯಕ್ತಿ ಪೂಜೆ ಮಾಡುವ ಮೂಲಕ ದೇಶದಲ್ಲಿ ಸರ್ವಾಧಿಕಾರವನ್ನು ತರಲು ಹೊರಟಿರುವ ಕಾರಣ ನಮ್ಮ ಸಂವಿಧಾನ ಅಪಾಯದಲ್ಲಿದೆ.
ಕೋಮುವಾದ, ಮತೀಯವಾದ ಹಾಗೂ ಧರ್ಮಾಂಧತೆ ಮೂಲಕ ಸ್ವಾತಂತ್ರ್ಯದ ಉದ್ದೇಶ ಹಾಗೂ ಕಾಂಗ್ರೆಸ್‌ನ ಹೋರಾಟದ ಆಶಯಗಳ ನಾಶಕ್ಕೆ ಕೋಮುವಾದಿಗಳು ಹೊರಟಿದ್ದಾರೆ ಹಾಗಾಗಿ ದೇಶದಲ್ಲಿ ಸಮಾನ ಅವಕಾಶಗಳು ಮತ್ತು ಸಮಾ ಸಮಾಜದ ಆಶಯ, ಸರ್ವಧರ್ಮಗಳನ್ನು ಪ್ರೀತಿಸುವವರ ಮತಗಳು ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಪಶುಪಾಲನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಜೀವನದಲ್ಲಿ ಕಹಿ ಉಂಡಿದ್ದರೂ ಸಹ ಎಲ್ಲ ವರ್ಗದ ಜನರು ನನ್ನಂತೆ ನಲುಗಬಾರದು ಎಂದು ಎಲ್ಲ ವರ್ಗದ ಜನರಿಗೂ ಸಮಾನವಾದ ಹಕ್ಕುಗಳನ್ನು ಸಂವಿಧಾನದಲ್ಲಿ ಕಲ್ಪಿಸಿಕೊಟ್ಟಿದ್ದಾರೆ. ಹಾಗಾಗಿ ಇಡೀ ವಿಶ್ವವೇ ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಳ್ಳುತ್ತಿದೆ ಎಂದರು.
ಇನ್ನು ಇತ್ತೀಚೆಗೆ ಮತೀಯ ಶಕ್ತಿಗಳು ಸಂವಿಧಾನವನ್ನೇ ಬದಲಿಸಲು ಮುಂದಾಗಿದ್ದಾರೆ ಇದರ ಬಗ್ಗೆ ಜಾಗೃತೆ ವಹಿಸಬೇಕು. ಇವರನ್ನು ಅಧಿಕಾರದಲ್ಲಿ ಮುಂದುವರಿಸಿದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ನವಿಲೂರು ಗ್ರಾಮ ಎತ್ತರವಾದ ಪ್ರದೇಶವಾಗಿದ್ದು, ಈ ಭಾಗಕ್ಕೆ ಕಾವೇರಿ ನೀರು ಬರುವ ಸಾಧ್ಯತೆ ಕಡಿಮೆ ಇದೆ. ಆದರೂ ಮತ್ತೊಮ್ಮೆ ಈ ಭಾಗದಲ್ಲಿ ನೀರು ತುಂಬಿಸುವ ಕೆಲಸಕ್ಕೆ ಪೂರಕವಾಗಿ ಕೆಲಸ ಮಾಡೋಣ, ಲೋಕಸಭೆ ಚುನಾವಣೆ ಮುಗಿದ ನಂತರ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಪಿರಿಯಾಪಟ್ಟಣದಲ್ಲಿ ಆಯೋಜಿಸೋಣ ಎಂದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಬುದ್ಧಿಸ್ಟ್ ಮಾಂಕ್ಸ್ ಟ್ರಸ್ಟ್ ನ ಬೋಧಿ ದತ್ತ ಭಂತೇಜಿ, ಬಹುಜನ ಚಿಂತಕ ರಘೋತ್ತಮ ಹೊ.ಬ, ನಳಂದ ಬೌದ್ಧಗುರು ಕರ್ಮಪ, ಮಾತನಾಡಿದರು.
ತಹಸೀಲ್ದಾರ್ ಕುಂಞಿ ಅಹಮದ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಗ್ರಾಪಂ ಅಧ್ಯಕ್ಷೆ ಸರೋಜ ಪ್ರಕಾಶ್, ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಮಹಾದೇವ್, ಮುಖಂಡರಾದ ನವಿಲೂರು ಮಹಾದೇವ್, ಪಿ.ಮಹದೇವ್, ಐಲಾಪುರ ರಾಮು, ಚನ್ನಕಲ್ ಶೇಖರ್, ಚೆಲುವರಾಜ್, ಗ್ರಾಪಂ ಸದಸ್ಯರಾದ ಯಶೋದಮ್ಮ, ಜಯಂತಿ, ಶಾಂತಮ್ಮ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.