ನ್ಯೂಡೆಲ್ಲಿ: ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ವಶಕ್ಕೆ ಪಡೆದುಕೊಂಡಿದದೆ. ಈ ಸಂಬಂಧ ಮಾರ್ಚ್ 31ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ‍್ಯಾಲಿ ನಡೆಸಲಾಗುತ್ತಿದೆ ಎಂದು ಎಎಪಿ ಹಾಗೂ ಕಾಂಗ್ರೆಸ್ ಜಂಟಿ ಘೋಷಣೆ ಮಾಡಿವೆ.
INDIA ಒಕ್ಕೂಟದ ಎಎಪಿ ಹಾಗೂ ಕಾಂಗ್ರೆಸ್ ಇಂದು ದೆಹಲಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ನಾಯಕ ಗೋಪಾಲ್ ರೈ, ಸದ್ಯ ಪ್ರಜಾಪ್ರಭುತ್ವ ಮತ್ತು ದೇಶ ಎರಡು ಅಪಾಯದಲ್ಲಿವೆ. ಹೀಗಾಗಿ ದೇಶದ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳು ಈ ಮಹಾ ರ‍್ಯಾಲಿಯನ್ನು ಹಮ್ಮಿಕೊಂಡಿವೆ ಎಂದು ಹೇಳಿದರು.
ಇನ್ನು ದೇಶದಲ್ಲಿ ಸರ್ವಾಧಿಕಾರ ಸರ್ಕಾರವಿದ್ದು ಪ್ರಜಾಪ್ರಭುತ್ವವನ್ನು ಬದಿಗೊತ್ತಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಸುಳ್ಳು ಕೇಸ್ಗಳನ್ನು ದಾಖಲಿಸಿ ವಿಪಕ್ಷದವರನ್ನು ಬಂಧಿಸಲಾಗುತ್ತಿದೆ. ಪ್ರಧಾನಿ ಮೋದಿ ಸರ್ಕಾರಿ ಇಲಾಖೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.
ದೆಹಲಿಯ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ಮಾತನಾಡಿ, ಈ ಪ್ರತಿಭಟನೆ ರಾಜಕೀಯಕ್ಕಾಗಿ ಅಥವಾ ಯಾವುದೇ ಪಕ್ಷಕ್ಕಾಗಿ ಮಾಡುತ್ತಿಲ್ಲ. ದೇಶ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಮಾಡಲಾಗುತ್ತಿದೆ. ಈ ಮಹಾರ‍್ಯಾಲಿ ಕೇಂದ್ರ ಸರ್ಕಾರದ ವಿರುದ್ಧ ಎಂದು ಹೇಳಿದರು.