ಬೆಂಗಳೂರು: ಕೇಂದ್ರ ಸರ್ಕಾರ ಎಲ್ಲ ಇಪಿಎಸ್ ನಿವೃತ್ತರಿಗೆ ಉಚಿತ ವೈದ್ಯಕೀಯ ಸೌಲಭ್ಯವನ್ನು ಕೂಡಲೇ ವಿಸ್ತರಿಸಬೇಕು ಎಂದು, ಆಡಳಿತ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಇಪಿಎಸ್ ನಿವೃತ್ತರ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆಯನ್ನು ಪ್ರಸ್ತಾಪಿಸಬೇಕು ಎಂದು ಠರಾವು ಮಾಡಲಾಗಿದೆ ಎಂದು ಬಿಎಂಟಿಸಿ & ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಕಳೆದ ವಾರ ದೆಹಲಿಯಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವತ್ ಅವರ ನೇತೃತ್ವದಲ್ಲಿ ಸರಣಿ ಎನ್ಎಸಿ ಕಾರ್ಯಕಾರಿ ಸಮಿತಿ ಸಭೆ ಜರುಗಿದ್ದು, ಆ ವೇಳೆ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆ ಪ್ರಸ್ತಾಪಿಸಬೇಕು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಆರ್.ಸಿ. ಗುಪ್ತ ನ್ಯಾಯಾಲಯ ನಿಂದನಾ ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ಮುಂದೆ ಏಪ್ರಿಲ್ 2ರಂದು ವಿಚಾರಣೆಗೆ ಬಂದಿದ್ದು, ಇಪಿಎಫ್ಒ ಅಧಿಕಾರಿಗಳು, ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಮೇ 18 ರಿಂದ ಜುಲೈ 08 ರವರೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಬೇಸಿಗೆ ಕಾಲದ ರಜೆ ಇದೆ. ಹಾಗಾಗಿ ಆರ್.ಸಿ. ಗುಪ್ತ ಪ್ರಕರಣವನ್ನು ಜುಲೈ 16 ಕ್ಕೆ ಮುಂದೂಡಲಾಗಿದೆ. ಆ ದಿನ ಅಧಿಕಾರಿಗಳು ನ್ಯಾಯಾಲಯಕ್ಕೆ ಅನುಷ್ಠಾನ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ. ಅಧಿಕಾರಿಗಳು ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಇತ್ತೀಚೆಗೆ ಕೇರಳ ರಾಜ್ಯ ಹಾಗೂ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ದ್ವಿಸದಸ್ಯಪೀಠದ ಮುಂದೆ ಇಪಿಎಫ್ಒ ಅಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿ ಹಾಗೂ ಪುನರ್ ಪರಿಶೀಲನಾ ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಿದ್ದು, ಹೀಗಾಗಿ ಹೆಚ್ಚುವರಿ ಪಿಂಚಣಿ ಪಡೆಯುತ್ತಿದ್ದ ಅರ್ಜಿದಾರರುಗಳಿಗೆ ( ಆರ್.ಸಿ.ಗುಪ್ತ ) ನ್ಯಾಯ ಸಿಕ್ಕಂತಾಗಿದೆ. ಕೇರಳ ರಾಜ್ಯ ಒಂದರಲ್ಲೆ ಕಳೆದ ಏಳು ವರ್ಷಗಳಿಂದ 24,500 ಜನ ಹೆಚ್ಚುವರಿ ಪಿಂಚಣಿ ಪಡೆಯುತ್ತಿದ್ದು, ಈಗ ನಿರಾಕರಿಸಿದಲ್ಲಿ ಅವರ ಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದ್ದಾರೆ.
ಇನ್ನು ಇದೇ ಏ.7ರಂದು ಹಮ್ಮಿಕೊಂಡಿರುವಮಾಸಿಕ ಸಭೆಗೆ ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಅವರು ಭಾಗವಹಿಸಲಿದ್ದು, ದೆಹಲಿಯಲ್ಲಿ ಎನ್ಎಸಿ ವತಿಯಿಂದ ಇತ್ತೀಚೆಗೆ ಕೈಗೊಂಡ ಎಲ್ಲ ನಿರ್ಣಯಗಳ ಬಗ್ಗೆ ಪ್ರಸ್ತುತಪಡಿಸಲಿದ್ದಾರೆ. ಇಪಿಎಸ್ ನಿವೃತ್ತರ ಎಲ್ಲ, ಕನಿಷ್ಠ ಹಾಗೂ ಹೆಚ್ಚುವರಿ ಪಿಂಚಣಿ ಸಮಸ್ಯೆಗಳು ಮೇ 31ರ ನಂತರ ಬಗೆಹರಿಯುವ ಎಲ್ಲ ಸೂಚನೆಗಳು ದಟ್ಟವಾಗಿವೆ. ಶಕ್ತಿ ಪ್ರದರ್ಶನಕ್ಕೆ ನಾವೆಲ್ಲರೂ ಸಜ್ಜಾಗಬೇಕು ಎಂದು ಕರೆ ನೀಡಿದ್ದಾರೆ.
ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೂ ತೋಟದಲ್ಲಿ ವಾಯುವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ ಮಾಡುವ ಜತೆಗೆ ವಿಚಾರ ವಿನಿಮಯ ಹಾಗೂ ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು 7/04/2024 ರಂದು ಬೆಳಗ್ಗೆ 8 ಗಂಟೆಗೆ ಹಾಜರಾಗಿ ಎಂದು ನಂಜುಂಡೇಗೌಡ ವಿನಂತಿಸಿಕೊಂಡಿದ್ದಾರೆ.