ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಇರುವ ಕಾನೂನು ತೊಡಕುಗಳಾದರೂ ಏನು? ಅವುಗಳನ್ನು ಬಗೆಹರಿಸುವುದಕ್ಕೆ ಏಕೆ ಆಡಳಿತ ಮಂಡಳಿ ಮುಂದಾಗುತ್ತಿಲ್ಲ ಎಂಬುದರ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ನಾಲ್ಕೂ ನಿಗಮದ ಆಡಳಿತ ಮಂಡಳಿಗಳನ್ನು ನೌಕರರು ಪ್ರಶ್ನಿಸಿದ್ದಾರೆ.
ಸಾರಿಗೆ ನಿಗಮಗಳ ಚಾಲನಾ ಸಿಬ್ಬಂದಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ಪ್ರಯಾಣಿಕರು ಮಾಡುವ ತಪ್ಪಿಗೆ ಇವರಿಗೇಕೆ ಮೆಮೋ ಕೊಡುವ ಪದ್ಧತಿ ಇದೆ. ತಪ್ಪು ಮಾಡಿದವರಿಗೆ ಮೆಮೋ ಕೊಟ್ಟು ಅವರಿಂದ ದಂಡ ವಸೂಲಿ ಮಾಡಬೇಕಲ್ಲವೇ?
ಜನರೇ ತಪ್ಪು ಮಾಡಿದ್ದಾರೆ ಎಂಬುವುದು ತನಿಖಾ ಸಿಬ್ಬಂದಿಗೂ ಗೊತ್ತಿದ್ದರೂ ಅವರ ಬದಲಿಗೆ ನಿರ್ವಾಹಕರಿಗೆ ಮೆಮೋ ಕೊಟ್ಟು ಬಳಿಕ ವಿಚಾರಣೆ ನೆಪದಲ್ಲಿ ನಿರ್ವಾಹಕರನ್ನು ಅಮಾನತಿನಲ್ಲಿ ಇಡುವುದರಿಂದ ಸಂಸ್ಥೆಗೆ ಲಾಭವಾಗುತ್ತದೋ ಇಲ್ಲ ನಷ್ಟವಾಗುತ್ತದೋ ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು.
ಇನ್ನು ಈ ಶಕ್ತಿ ಯೋಜನೆ ಜಾರಿಗೆ ಬಂದಮೇಲೆ ಮಹಿಳೆಯರು ಟಿಕೆಟ್ ತೆಗೆದುಕೊಳ್ಳದೆ ಉದಾಸೀನತೆಯಿಂದ ಕುಳಿತುಕೊಳ್ಳುತ್ತಿರುವುದು ಕಂಡು ಬಬರುತ್ತಿದೆ. ಆದರೂ ಅವರಿಗೆ ದಂಡ ಹಾಕುವುದಿಲ್ಲ ಏಕೆ? ಬದಲಿಗೆ ನಿರ್ವಾಹಕರನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದೀರಾ ಇದಕ್ಕೆ ಸರಿಯಾದ ಕಾರಣವನ್ನು ಈವರೆಗೂ ಯಾವೊಬ್ಬ ಅಧಿಕಾರಿಯೂ ನೀಡಿಲ್ಲ.
ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಬಹುತೇಕ ಎಲ್ಲ ಬಸ್‌ಗಳು ಒಂದು ಇರುವೆ ಕೂಡ ನುಸುಳಿ ಹೋಗುವುದಕ್ಕೂ ಜಾಗವಿಲ್ಲದಷ್ಟು ತುಂಬಿಹೋಗುತ್ತಿವೆ. ಈ ನಡುವೆ ನಿರ್ವಾಹಕರು ಅವರಿಗಿರುವ ಸಮಯದಲ್ಲಿ ಒಬ್ಬೊಬ್ಬರನ್ನು ಕೇಳಿ ಕೇಳಿ ಟಿಕೆಟ್ ಕೊಡುವುದಕ್ಕೆ ಸಾಧ್ಯವಾ? ಹೀಗಿರುವಾಗ ನಿರ್ವಾಹಕರನ್ನು ಕೇಳಿ ಟಿಕೆಟ್ ಪಡೆದುಕೊಳ್ಳುವುದು ಮಹಿಳೆಯರ ಕರ್ತವ್ಯವಲ್ಲವಾ?
ಈ ಬಗ್ಗೆ ಏಕೆ ನೀವು ಯಾವುದೇ ತಿಳಿವಳಿಯನ್ನು ಮೂಡಿಸುವ ಕೆಲಸವನ್ನು ನಿಗಮಗಳಿಂದ ಮಾಡಿಲ್ಲ. ಇದರಿಂದ ನಿರ್ವಾಹಕರಿಗೆ ಒತ್ತಾಡ ಹೆಚ್ಚಾಗಿ 30ರಿಂದ 45 ವರ್ಷದೊಳಗಿನ ಎಷ್ಟೋ ಮಂದಿ ಚಾಲನಾ ಸಿಬ್ಬಂದಿ ತಮ್ಮ ಉಸಿರು ಚೆಲ್ಲುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತಿಲ್ಲವೇ?
ಪ್ರಮುಖವಾಗಿ ಸಾರ್ವಜನಿಕ ಉದ್ದಿಮೆ ಎಂದು ಕರೆಯಲ್ಪಡುವ ಸಾರಿಗೆ ನಿಗಮ ಉತ್ಪಾದನೆ ಮಾಡುತ್ತಿರುವ ವಸ್ತು ಯಾವುದು? ಸಾರ್ವಜನಿಕ ಉದ್ದಿಮೆ ಎಂದು ಕರೆಯಲ್ಪಡುವ ಸಾರಿಗೆ ನಿಗಮವನ್ನು ಎಸ್ಮಾ ಕಾಯ್ದೆ ಅಡಿಯಲ್ಲಿ ತರಲು ಕಾರಣ ಆಗಿರುವ ಅಂಶಗಳಾದರೂ ಯಾವುವು?
ಸಾರ್ವಜನಿಕ ಸೇವಾ ಸಂಸ್ಥೆಯನ್ನು ವ್ಯಾವಹಾರಿಕವಾಗಿ/ ಆರ್ಥಿಕವಾಗಿ ಲಾಭ/ ನಷ್ಟ ಎಂದು ಪರಿಗಣಿಸಲು ಇರುವ ಅಂಶಗಳು ಯಾವುವು? ಮೊದಲಿನ ಹಾಗೆ ಸಾರಿಗೆ ನಿಗಮವನ್ನು ಸಾರಿಗೆ ಇಲಾಖೆಯ ಅಧೀನದ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಲು ಇರುವ ಕಾನೂನಾತ್ಮಕ ತೊಡಕುಗಳಾದರೂ ಏನು?
ಉಳಿದ ಸಾರ್ವಜನಿಕ ಸೇವಾ ಇಲಾಖೆಗಳಾದ ಶಿಕ್ಷಣ/ ಪೊಲೀಸ್/ ಆರೋಗ್ಯ/ ಅಗ್ನಿಶಾಮಕ/ ಸಮಾಜ ಕಲ್ಯಾಣ ಇಲಾಖೆಗಳಂತೆ ಸಾರ್ವಜನಿಕ ಸಾರಿಗೆ ಇಲಾಖೆ ಎಂದು ಮರುನಾಮಕರಣ ಮಾಡಲು ಇರುವ ಕಾನೂನಾತ್ಮಕ ತೊಡಕುಗಳು ಏನು? ಸಾರ್ವಜನಿಕ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಕೈಗಾರಿಕಾ ನಿಯಮದ ಅಡಿಯಲ್ಲಿ ಕಾರ್ಮಿಕ ಎಂದು ಸಂಬೋಧಿಸಿ ಕೈಗಾರಿಕಾ ನಿಯಮಗಳ ಅಡಿಯಲ್ಲಿ ಕೈಗಾರಿಕಾ ಒಪ್ಪಂದ ಮಾಡಿಕೊಳ್ಳುವಂತೆ ಹೊರಡಿಸಿರುವ ಆದೇಶದ ಬಗ್ಗೆ ಇರುವ ನಿರ್ದೇಶನಗಳು ಯಾವುವು?
ಇನ್ನುಳಿದ ನಿಗಮ/ ಮಂಡಳಿ ನೌಕರರಿಗೆ ಅನ್ವಯಿಸುವಂತೆ ಸಾರಿಗೆ ನಿಗಮದ ನೌಕರರಿಗೂ ಸಹಾ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಇರುವ ಕಾನೂನಾತ್ಮಕ ತೊಡಕುಗಳು ಏನು? ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕೈಗಾರಿಕಾ ಒಪ್ಪಂದ ಎಂದು ಹೇಳಿಕೊಂಡು ಸಮಸ್ಯೆ ಬಗೆಹರಿಯದೆ ಇದ್ದಾಗ ಸಾರ್ವಜನಿಕರಿಗೆ/ ವಿದ್ಯಾರ್ಥಿಗಳಿಗೆ ಪ್ರತಿಭಟನೆ/ ಮುಷ್ಕರ ಎಂದು ತೊಂದರೆ ಕೊಡುವ ಸಾರಿಗೆ ನೌಕರರನ್ನು ಸಹ ವೇತನ ಆಯೋಗದ ಅಡಿಯಲ್ಲಿ ತಂದು ಅವರೇ ಕೇಳುತ್ತಿರುವ ಹಾಗೆ ಶಾಶ್ವತ ಪರಿಹಾರ ಸೂಚಿಸಲು ಇರುವ ಕಾನೂನಾತ್ಮಕ ತೊಡಕುಗಳು ಏನು?
ಈಎಲ್ಲ ಅಂಶಗಳಿಗೆ ಏನಾದರೂ ಕಾನೂನಾತ್ಮಕ ತೊಡಕುಗಳು ಇರುವುದೇ ಆದರೆ ಅವುಗಳನ್ನು ತಿದ್ದುಪಡಿ ಮಾಡಲು ಶಾಸಕಾಂಗದ ಅಥವಾ ನ್ಯಾಯಾಂಗದ ಮೊರೆ ಹೋಗಲು ಸಾಧ್ಯವೇ ಎಲ್ಲದರ ಬಗ್ಗೆ ಸಂಬಂಧಪಟ್ಟ ಕಾರ್ಯದರ್ಶಿ, ಹಣಕಾಸು ಇಲಾಖೆ, ಕಾರ್ಯದರ್ಶಿ, ಸಾರಿಗೆ ಇಲಾಖೆ, ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟನೆಯನ್ನು ಕೊಡುವ ಮೂಲಕ ಕೆಲ ಸಂಘಟನೆಗಳು ನೌಕರರಿಗೆ ಮಾಡುತ್ತಿರುವ ಅನ್ಯಾಯವನ್ನು ಬಹಿರಂಗ ಪಡಿಸಬೇಕು ಎಂದು ಸಮಸ್ತ ಸಾರಿಗೆ ನೌಕರರು ಭಾರಿ ವಿನಮ್ರವಾಗಿ ಮನವಿ ಮಾಡಿದ್ದಾರೆ.