ವಿಜಯಪುರ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗೆ ಏಪ್ರಿಲ್ 17ರಿಂದ ಏಪ್ರಿಲ್ 29ರ ವರೆಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಮಾಡಿದ್ದಾರೆ.
ಕೆಕೆಆರ್‌ಟಿಸಿ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜೆ. ಮಹಮ್ಮದ್ ಪೈಜ್ ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವವರು.
ಇನ್ನು ಈ ತೆರೆವಾದ ಸ್ಥಾನಕ್ಕೆ ವಿಭಾಗೀಯ ಸಂಚಾರ ಅಧಿಕಾರಿಯಾಗಿರುವ ದೇವಾನಂದ ಎ. ಬಿರಾದಾರ ಅವರನ್ನು ಮುಂದಿನ ಆದೇಶದವರೆಗೆ ಅವರ ಹುದ್ದೆಯ ಕಾರ್ಯದ ಜತೆಗೆ ಹೆಚ್ಚುವರಿಯಾಗಿ ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆಯ ದೈನಂದಿನ ಕಾರ್ಯಭಾರ ನಿರ್ವಹಿಸುವಂತೆ ಆದೇಶಿಸಿದ್ದಾರೆ.
ಇದೇ ಏಪ್ರಿಲ್ 14ರಂದು ವಿಜಯಪುರ ಜಿಲ್ಲಾಧಿಕಾರಿ ಅವರು ಇಮೇಲ್ ಮಾಡುವ ಮೂಲಕ ವಿಭಾಗೀಯ ನಿಯಂತ್ರಣಾಧಿಕಾರಿ ಜೆ. ಮಹಮ್ಮದ್ ಪೈಜ್ ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದರು.
ಜಿಲ್ಲಾಧಿಕಾರಿಗಳ ಇಮೇಲ್ ಬಂದ ಬಳಿಕ ಪರಿಶೀಲನೆ ನಡೆಸಿದ್ದು, ಜೆ. ಮಹಮ್ಮದ್ ಪೈಜ್ ಅವರು ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಚುನಾವಣೆ ನೀತಿ ಸಂಹಿತೆಗೆ ಬಾದಕವಾಗಬಾರದೆಂದು ಏ.17 ರಿಂದ 29ರವರೆಗೆ ಕಡ್ಡಾಯ ರಜೆ ಮೇಲೆ ತೆರಳಲು ಆದೇಶಿಸಲಾಗಿದೆ.
ಈ ಸಂಬಂಧ ನಿಗಮದ ಮುಖ್ಯ ಲೆಕ್ಕಾಧಿಕಾರಿ, ಎಲ್ಲ ಇಲಾಖಾ ಮುಖ್ಯಸ್ಥರು, ವಿಭಾಗೀಯ ನಿಯಂತ್ರಣಾಧಿಕಾರಿ, ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಪ್ರಾಂಶುಪಾಲರು, ಕಾರ್ಯ ನಿರ್ವಾಹಕ ಅಭಿಯಂತರರು, ಕಾರ್ಯ ವ್ಯವಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಆಪ್ತ ಕಾರ್ಯದರ್ಶಿ ಅವರಿಗೂ ಮಾಹಿತಿಗಾಗಿ ಪ್ರತಿಯನ್ನು ಕಳುಹಿಸಲಾಗಿದೆ ಎಂದು ಸಿಬ್ಬಂದಿ ವ್ಯವಸ್ಥಾಪಕರು ತಿಳಿಸಿದ್ದಾರೆ.