ತುಮಕೂರು: ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರೀ ಗಾಳಿ ಮಳೆಯ ರಭಸಕ್ಕೆ ಚಲಿಸುತ್ತಿದ್ದ ಕಾರೊಂದು ಉರುಳಿ ಬಿದ್ದೀರುವ ಘಟನೆ ನಡೆದಿದೆ. ಜತೆಗೆ ಭಾರಿ ಅನಾಹುತ ನಡೆದಿದ್ದು, ಗುಬ್ಬಿ ತಾಲೂಕಿನ ಹೊಸಳ್ಳಿ ರಸ್ತೆಯಲ್ಲಿ ಬೃಹತ್ ಮರ ನೆಲ ಕಚ್ಚಿದೆ.
ಪರಿಣಾಮ ಗುಬ್ಬಿ- ಹೊಸಳ್ಳಿ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿಯ ರಭಸಕ್ಕೆ ಮರ ಬಿದ್ದಿದೆ. ವರುಣನ ಆರ್ಭಟದಿಂದ ರಸ್ತೆಯಲ್ಲಿ ಸಮಸ್ಯೆಯಾಗಿ ಕಾರು ಪಲ್ಟಿ ಹೊಡೆದಿದೆ.
ಜೋರಾದ ಗಾಳಿ ಬಂದ ಹಿನ್ನೆಲೆಯಲ್ಲಿ ಡ್ರೈವರ್ ಬ್ರೇಕ್ ಹಾಕಲು ಮುಂದಾಗಿದ್ದಾನೆ. ಆದರೆ, ಬ್ರೇಕ್ ಹಾಕುತ್ತಿದ್ದಂತೆಯೇ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ. ನಡು ರಸ್ತೆಯಲ್ಲಿ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದವರು ಸದ್ಯ ಪ್ರಾಣಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಆರು ದಿನ ಮಳೆ ಮುನ್ಸೂಚನೆ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಕೂಡ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜತೆಗೆ ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಿದೆ.
ಮಳೆಯ ಮುನ್ಸೂಚನೆ ಮತ್ತು ಎಚ್ಚರಿಕೆ ನೀಡಿರುವ ರಾಜ್ಯ ಹವಾಮಾನ ಇಲಾಖೆ, ಮೇ 18ರವರೆಗೆ ಮಳೆ ಆಗಲಿದೆ ಎಂದಿದೆ. ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುಡುಗು, ಗಾಳಿ ಸಹಿತ ಭಾರೀ ಮಳೆ ಸಾಧ್ಯತೆ ಇದೆ.
ಇನ್ನು ಬಾಗಲಕೋಟೆ, ಧಾರವಾಡ, ಗದಗ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜೋರಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆ ಸಾಧ್ಯತೆ ಇದೆ. ಕೊಪ್ಪಳ, ಹಾವೇರಿ, ಹಾಸನ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗಾಳಿ, ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.