ಬೆಂಗಳೂರು : KSRTC ನಿಗಮದ ಕೇಂದ್ರ ಕಚೇರಿಯಲ್ಲಿ ಜಂಟಿ ಕ್ರಿಯಾ ಸಮಿತಿ ಮಂಗಳವಾರ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ 2024ರ ವೇತನ ಪರಿಷ್ಕರಣೆ ಹಾಗೂ 38 ತಿಂಗಳ ಹಿಂಬಾಕಿ ಹಣ ಬಿಡುಗಡೆ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಅತೀ ಶೀಘ್ರವೇ ಕ್ರಮ ಜರುಗಿಸಲು ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ 2024 ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆ ಮತ್ತು 2020 ಜನವರಿ 1ರಿಂದ ಹೆಚ್ಚಳವಾಗಿರುವ ವೇತನ ಹಿಂಬಾಕಿಯನ್ನು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ಕೂಡಲೇ ಅಂದರೆ ಜೂನ್ 6ರ ಬಳಿಕ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಕೇಂದ್ರ ಕಚೇರಿ ನಡೆದಂತಹ 2020ರ ವೇತನ ಪರಿಷ್ಕರಣೆಯ ಹಿಂಬಾಕಿಯನ್ನು ನಿವೃತ್ತ ನೌಕರರಿಗೆ ಮುಂದಿನ ತಿಂಗಳು ಆರನೇ ತಾರೀಖಿನ ಮೇಲ್ಪಟ್ಟು ಆದೇಶ ಮಾಡುವದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕಚೇರಿಯಲ್ಲಿ ಚುನಾವಣೆ ಪ್ರಯುಕ್ತ ಲಭ್ಯವಿಲ್ಲದ ಕಾರಣ ನೀತಿ ಸಂಹಿತೆ ಮುಕ್ತಾಯ ನಂತರ ಆದೇಶಿಸುವುದಾಗಿ ಹೇಳಿದ್ದಾರೆ.
ಸಾರಿಗೆ ಅಧಿಕಾರಿಗಳು ಮತ್ತು ನೌಕರರ ವೇತನ ಪರಿಷ್ಕರಣೆ 2024 ಜನವರಿ 1ರಿಂದ ಆಗಬೇಕಿದೆ. ಇದರ ಜತೆಗೆ 2020 ಜನವರಿ 1ರಿಂದ ಜಾರಿಯಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಕೊಡುವ ಬಗ್ಗೆಯೂ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಸಭೆ ನಡೆಸಲಾಗಿದೆ. ಇನ್ನು ಈ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಮತ್ತೊಂದು ಸುತ್ತಿನ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು 1.1.2020ರ ವೇತನ ಅರಿಯರ್ಸ್ ನಿವೃತ್ತ ನೌಕರರಿಗೂ ಸಹ ಪರಿಷ್ಕರಣೆ ಮಾಡಲು ಒಪ್ಪಿದ್ದು ತ್ವರಿತವಾಗಿ ಆದೇಶವನ್ನು ಹೊರಡಿಸಲಾಗುವುದೆಂದು ಆಶ್ವಾಸನೆ ನೀಡಿದರು. 2020ರ ಜನವರಿ 1ರಿಂದ ಶೇ.15ರಷ್ಟು ವೇತನ ಹೆಚ್ಚಳವಾಗಿದ್ದು ಅಂದಿನಿಂದಲೇ ಈ ವೇತನ ಹೆಚ್ಚಳದ ಹಿಂಬಾಕಿಯನ್ನು ಕೊಡಬೇಕು, ಈ ನಡುವೆ ನಿವೃತ್ತರಾದ ನೌಕರರು ಮತ್ತು ಅಧಿಕಾರಿಗಳಿಗೂ ಅವರು ನಿವೃತ್ತಿ ಹೊಂದಿದ ದಿನದವರೆಗೂ ಅದು ಜಮೆಯಾಗಬೇಕು ಎಂಬುವುದು ನಮ್ಮ ಗಮನದಲ್ಲಿದೆ ಎಂದು ಹೇಳಿದರು.
ಈ 2020ರ ವೇತನ ಹೆಚ್ಚಳದ ಶೇ.15ರಷ್ಟು ಅರಿಯರ್ಸ್ ಕೊಡದೆ ಮತ್ತೆ 2024ರ ವೇತನ ಪರಿಷ್ಕರಣೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ಈ ಹಿಂದೆಯೇ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನೌಕರರು ಕೂಡ ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ ಈ ಎಲ್ಲವನ್ನು ಈಗಾಗಲೇ ಪರಿಗಣನೆಗೆ ತೆಗೆದುಕೊಂಡಿದ್ದು ಅಧಿಕಾರಿಗಳು ಮತ್ತು ನೌಕರರಿಗೆ ಒಳ್ಳೆಯದಾಗುವ ನಿಧಾರವನ್ನೇ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಈ ಬಗ್ಗೆ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದರೆ ನಮಗೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೆ ಅಂದಿನ ಸರ್ಕಾರ ಮಾಡಿದ ಎಡವಟ್ಟಿನಿಂದ ನಾವು ಇಂದು ನಾಳೆ ಎಂಬ ಸಮಯ ತೆಗೆದುಕೊಳ್ಳಬೇಕಿದೆ. ಆದರೂ ಚಿಂತೆಯಿಲ್ಲ ನೌಕರರಿಗೆ ಒಳ್ಳೆಯದಾಗುವುದೆ ನಮಗೆ ಬೇಕಿರುವುದು ಎಂದರು.
ಸಚಿವರ ಭೇಟಿ ವೇಳೆ ಜಂಟಿ ಕ್ರಿಯಾಸಮಿತಿಯ ಪದಾಧಿಕಾರಿಗಳು, ನೌಕರರು ಸೇರಿದಂತೆ ಇತರ ಅಧಿಕಾರಿಗಳು ಇದ್ದರು.