- ತಮ್ಮದಲ್ಲದ ತಪ್ಪಿಗೆ ಅಮಾನತು ಶಿಕ್ಷೆಗೊಳಗಾದ ನಿರ್ವಾಹಕರ ಪರ ಧಾವಿಸುವಂತೆ ನಾಗರಾಜು ಗೋಳೂರು ಮನವಿ
ಬೆಂಗಳೂರು/ಕೋಲಾರ/ ಚಾಮರಾಜನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 8,76,572 ರೂ.ಗಳನ್ನು ಸಂಸ್ಥೆಗೆ ನಷ್ಟ ಮಾಡಿರುವ ಅಧಿಕಾರಿಗಳ ಶಿಕ್ಷಿಸಬೇಕು. ಚಾಲನಾ ಸಿಬ್ಬಂದಿ ಹಾಗೂ ಪ್ರಯಾಣಿಕರ ಪ್ರಾಣದ ಜತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆರಾಧನಾ ಸಮಿತಿ ಮಾಜಿ ಸದಸ್ಯ ವಿ.ನಾಗರಾಜು ಗೋಳೂರು ಒತ್ತಾಯಿಸಿದ್ದಾರೆ.
ಈ ಸಂಬಂಧ ಮೇ 14ರಂದು (ಮಂಗಳವಾರ) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ರಜನೀಶ್ ಗೋಯಾಲ್ ಅವರಿಗೆ ದೂರು ನೀಡಿದ್ದು, ನಿಗಮಗಳಲ್ಲಿ ಇರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
ಕೋಲಾರ ವಿಭಾಗದಲ್ಲಿ ನಿಗಮಕ್ಕೆ 8,76,572 ರೂಪಾಯಿ ನಷ್ಟಮಾಡಿರುವ ಅಧಿಕಾರಿಗಳು ಮತ್ತು ತಪ್ಪು ಮಾಡದ ನಿರ್ವಾಹಕರ ಅಮಾನತು ಮಾಡಿರುವ ಬಗ್ಗೆ ಅಲ್ಲದೆ ಚಾಮರಾಜನಗರ ವಿಭಾಗದಲ್ಲಿ ಮೇ 1ರಂದು ನಿರ್ವಾಹಕನ ಅಮಾನತು ಮಾಡಿರುವ ಬಗ್ಗೆ ವಿಜಯಪಥದಲ್ಲಿ ಇದೇ ಮೇ 12ರಂದು ವರದಿ ಪ್ರಕಟವಾಗಿತ್ತು. ಈ ವರದಿ ಬಂದ ಬಳಿಕ ವಿ.ನಾಗರಾಜು ಗೋಳೂರು ಅವರು ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಚಾಮರಾಜನಗರ ವಿಭಾಗದ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಕರು ಟಿಕೇಟ್ ಪಡೆದು ಅರ್ಧದಾರಿಯಲ್ಲೇ ಬಸ್ ಇಳಿದು ಹೋದ ಪ್ರಯಾಣಿಕ ಮಹಿಳೆಯೊಬ್ಬರು ಮಾಡಿದ ತಪ್ಪಿಗೆ ನಿರ್ವಾಹಕರನ್ನು ಅಮಾನತು ಪಡಿಸಿರುವುದು ಸರಿಯಲ್ಲ. ಹೀಗಾಗಿ ಅವರ ಅಮಾನತು ಆದೇಶವನ್ನು ಹಿಂಪಡೆಯಲು ಅದೇಶ ನೀಡಿ ಎಂದು ಮನವಿ ಮಾಡಿದ್ದಾರೆ.
ಇನ್ನು ನಾಲ್ಕು ನಿಗಮದ ಕೇಂದ್ರ ಕಚೇರಿಯ ಅಧಿಕಾರಿಗಳು, ವ್ಯವಸ್ಥಾಪಕ ನಿರ್ದೇಶಕರಿಗೆ ಈ ಬಗ್ಗೆ ಸೂಕ್ತ ನಿಯಮಗಳನ್ನು ಜಾರಿಗೆ ತರುವ ಮೂಲಕ ಚಾಲಕ ಮತ್ತು ನಿರ್ವಾಹಕರು ಮಾಡದ ತಪ್ಪಿನ ಪ್ರಕರಣಗಳಡಿ ಚಾಲನಾ ಸಿಬ್ಬಂದಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಆದೇಶ ಹೊರಡಿಸಲು ನಿರ್ದೇಶನ ನೀಡಬೇಕು ಎಂದು ರಜನೀಶ್ ಗೋಯಾಲ್ ಅವರಲ್ಲಿ ಮನವಿ ಮಾಡಿದ್ದಾರೆ.
ಇನ್ನು ನಿಗಮಕ್ಕೆ ಕೋಲಾರ ವಿಭಾಗದಲ್ಲಿ 8,76,572 ರೂಪಾಯಿ ನಷ್ಟಮಾಡಿರುವ ಮತ್ತು ಕೋಲಾರ ಮತ್ತು ಚಾಮರಾಜನಗರ ವಿಭಾಗದ ಅಧಿಕಾರಿ ಹಾಗೂ ವಿಭಾಗೀಯ ನಿಯಂಂತ್ರಣಾಧಿಕಾರಿಗಳ ಮೇಲೆ ಕೂಲಂಕಶವಾಗಿ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿಗಳಿಂದ ತನಿಖೆ ನಡೆಸಿ ಸೂಕ್ತ ಶಿಸ್ತುಕ್ರಮ ಜರುಗಿಸಲು ಸೂಚಿಸಬೇಕು ಎಂದು ದೂರಿನಲ್ಲಿ ವಿನಂತಿಸಿದ್ದಾರೆ.
ಸಂಸ್ಥೆಗೆ ನಷ್ಟವುಂಟು ಮಾಡಿದ ಅಧಿಕಾರಿಗಳು: ಒಂದನೇ ಫೆಬ್ರವರಿ 2018ರಿಂದ 4ನೇ ಸೆಪ್ಟೆಂಬರ್ 2019ರವರೆಗೆ ಕೋಲಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ 2018ರ ನಿರ್ದೇಶನಗಳನ್ನು ಉಲ್ಲಘಿಸಿ ತನ್ಮೂಲಕ ನಿಗಮಕ್ಕೆ 4,50,297 ರೂ.ಗಳನ್ನು ಅಂದಿನ ವಿಭಾಗೀಯ ಸಂಚಾರ ಅಧಿಕಾರಿ ಬಿ.ಸಿ ನಿರಂಜನ ಅವರು (ಪ್ರಸ್ತುತ ನಿವೃತ್ತರಾಗಿದ್ದಾರೆ) ಸಂಸ್ಥೆಗೆ 4,50,297 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ನೇರವಾಗಿ ಕಾರಣರಾಗಿದ್ದಾರೆ.
ಅದೇರೀತಿ ಕೋಲಾರ ವಿಭಾಗದಲ್ಲೇ 01-2-2018 ರಿಂದ 4-9-2019 ರವರೆಗೆ ಕಾನೂನು ಅಧಿಕಾರಿಯಾಗಿದ್ದ ಎಂ.ವೀರಭದ್ರಪ್ಪ ಅವರು ಕೂಡ ನಿಗಮಕ್ಕೆ 1,51,792 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ನೇರವಾಗಿ ಜವಾಬ್ದಾರರಾಗಿದ್ದಾರೆ.
ಇನ್ನು ಪ್ರಸ್ತುತ ಕೋಲಾರ ವಿಭಾಗದಲ್ಲೇ ಪ್ರಸ್ತುತ ಸಂಚಾರ ಅಧಿಕಾರಿಯಾಗಿರುವ ಎಂ.ಬಿ.ಜೈಶಾಂತಕುಮಾರ್ ಕೂಡ 25-10-2020ರಿಂದ 12-11-2021ರರವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ನಿಗಮಕ್ಕೆ 2,74,483 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ನೇರವಾಗಿ ಜವಾಬ್ದಾರರಾಗಿದ್ದಾರೆ ಎಂದ ಆರೋಪವಿದೆ.
ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರೇ ಸ್ವತಃ ಕಳೆದ 2022ರ ಜೂನ್ 20ರಂದು ಕಾರಣ ಕೇಳಿ ಆಪಾದನ ಪತ್ರ ನೀಡಿದ್ದಾರೆ. ಆದರೆ ಈವರೆಗೂ ಲಕ್ಷ ಲಕ್ಷ ರೂಪಾಯಿಗಳ ಆರ್ಥಿಕ ನಷ್ಟ ಉಂಟು ಮಾಡಿರುವ ಈ ಅಧಿಕಾರಿಗಳ ವಿರುದ್ಧ ಯಾವುದೆ ನಾನೂನು ಕ್ರಮ ಜರುಗಿಸಿಲ್ಲ.
ಹೀಗಾಗಿ ಎಂಡಿ ಅವರು ಏಕೆ ಕ್ರಮ ತೆಗೆದುಕೊಂಡಿಲ್ಲ ಎಂಬುದರ ಬಗ್ಗೆ ತನಿಖೆ ನಡೆಸಬೇಕು. ಜತೆಗೆ ನಷ್ಟ ಮಾಡಿರುವ ಅಧಿಕಾರಿಗಳಿಂದ ಅಷ್ಟೂ ಹಣವನ್ನು ರಿಕವರಿ ಮಾಡಿಕೊಳ್ಳುವುದಕ್ಕೆ ಆದೇಶ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಜೈಶಾಂತಕುಮಾರ್ ಅಮಾನತಿಗೆ ಒತ್ತಾಯ: ಇನ್ನು ನಿಗಮಕ್ಕೆ 2,74,483 ರೂ.ಗಳಷ್ಟು ಆರ್ಥಿಕ ನಷ್ಟವುಂಟಾಗಲು ನೇರವಾಗಿ ಜವಾಬ್ದಾರರಾಗಿರುವ ಸಂಚಾರ ಅಧಿಕಾರಿ ಜೈಶಾಂತಕುಮಾರ್ ಅವರು ಪ್ರಸ್ತುತ ಕೋಲಾರ ವಿಭಾಗದಲ್ಲೇ ಸಂಚಾರ ಅಧಿಕಾರಿಯಾಗಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಅಮಾನತು ಮಾಡಿ ವಿಚಾರಣೆಗೆ ಒಳಪಡಿಸಬೇಕು ಎಂದು ನಾಗರಾಜು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: KSRTC ಸಂಸ್ಥೆಗೆ ₹8.76 ಲಕ್ಷ ನಷ್ಟಮಾಡಿದ ಅಧಿಕಾರಿಗಳ ರಕ್ಷಣೆ – ಕೇವಲ 140 ರೂ. ಆರೋಪದಡಿ ಇಬ್ಬರು ನಿರ್ವಾಹಕರ ಅಮಾನತು !!
ಇನ್ನು ಕೇವಲ 140 ರೂಪಾಯಿ ಆರೋಪದಡಿ ಇಬ್ಬರು ನಿರ್ವಾಹಕರ ಅಮಾನತು ಮಾಡಿರುವ ಸಂಸ್ಥೆಯಲ್ಲಿ ಲಕ್ಷ ಲಕ್ಷ ರೂ. ನಷ್ಟವುಂಟು ಮಾಡಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿರುವುದು ಸರಿಯಲ್ದೆಲ. ಈ ಬಗ್ಗೆ ಕೇಳಬೇಕಾದ ಎಂಡಿ ಅನ್ಬುಕುಮಾರ್ ಅವರು ಜಾಣ ಮೌನವಹಿಸಿರುವುದನ್ನು ನೋಡುತ್ತಿದ್ದರೆ ಇವರೊಬ್ಬ ಪ್ರಾಮಾಣಿಕ ನೌಕರರ ಸ್ನೇಹಿ ಅಧಿಕಾರಿ ಎಂದು ಹೇಳುವುದಕ್ಕೆ ಮುಜುಗರವಾಗುತ್ತಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ರಜನೀಶ್ ಗೋಯಾಲ್ ಅವರಿಗೆ ನೀಡಿರುವ ದೂರಿನಲ್ಲಿ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: KSRTC: ಟಿಕೆಟ್ ಪಡೆದು ಅರ್ಧದಲ್ಲೇ ಬಸ್ ಇಳಿದ ಮಹಿಳೆ – ಸಲ್ಲದ ಕೇಸ್ಹಾಕಿ ಕಂಡಕ್ಟರ್ ಅಮಾನತು ಮಾಡಿದ ಡಿಸಿ !