ತಿ.ನರಸೀಪುರ: ಬರ ಪರಿಹಾರ ಹಣ ಸಾಲಕ್ಕೆ ಜಮಾ ಮಾಡಿದ ಮಾದಾಪುರ ಕೆನರಾ ಬ್ಯಾಂಕ್ ಶಾಖೆಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದರಿಂದ ರೈತರ ಖಾತೆಗೆ ವಾಪಸ್ ಹಣ ಜಮಾ ಮಾಡಲು ಕೆನರಾ ಬ್ಯಾಂಕ್ನ ಜಿಲ್ಲಾ ವ್ಯವಸ್ಥಾಪಕ ಉಮೇಶ್ ಒಪ್ಪಿಕೊಂಡಿದ್ದಾರೆ.
ಬಳಿಕ ಬೇಕೇ ಬೇಕು ನ್ಯಾಯ ಬೇಕು ನ್ಯಾಯಯುತ ಬರ ಪರಿಹಾರ ನೀಡಲೇಬೇಕು ಎಂದು ಘೋಷಣೆ ಕೂಗುತ್ತಾ ನೂರಾರು ರೈತರು ಇಂದು ತಿ.ನರಸಿಪುರ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರರ ಅನುಪಸ್ಥಿತಿಯಲ್ಲಿ ಶಿರಸ್ತೇದಾರ್ ಮಂಜುಳ ಅವರಿಗೆ ಒತ್ತಾಯ ಪತ್ರ ಸಲ್ಲಿಸಿದರು.
ರಾಜ್ಯ ಸರ್ಕಾರ ರೈತರಿಗೆ ನೀಡುವ ಬರ ಪರಿಹಾರ ಭಿಕ್ಷೆಯಲ್ಲ ಬೆರಳೆಣಿಕೆಯಷ್ಟು ರೈತರಿಗೆ 500- 1000 ರೂ. ಪರಿಹಾರ ನೀಡಿ ರೈತರನ್ನು ವಂಚಿಸುತ್ತಿರುವ ಸರ್ಕಾರದ ಇಬ್ಬಗೆಯ ನೀತಿಯನ್ನು ಧಿಕ್ಕರಿಸುತ್ತೇವೆ ಎಂದು ಕಿಡಿಕಾರಿದರು.
ಇನ್ನು ಮಳೆ ಹಾನಿ, ಬಾಳೆ ಬೆಳೆ ನಷ್ಟ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲ ಬೆಳೆ ನಷ್ಟಕ್ಕೂ ಎಲ್ಲ ರೈತರಿಗೂ ಬರ ಪರಿಹಾರ ನೀಡಬೇಕು. ಸರ್ಕಾರ ನಾಟಕೀಯವಾಗಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಬೇಡ. ಎಕರೆಗೆ ಕನಿಷ್ಠ 25,000 ರೂ. ನೀಡಲೇಬೇಕು ತಾಲೂಕಿನ ಎಲ್ಲ ಕೆರೆಗಳ ನಾಲೆಗಳ ಹುಳು ತೆಗೆಸಿ ರೈತರ ಜಮೀನುಗಳಿಗೆ ಸರಬರಾಜು ಮಾಡಿ ಭೂಮಿ ಫಲವತ್ತತೆಗೆ ಒತ್ತು ನೀಡಲು ಕಾರ್ಯ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಮಳೆ ಕಡಿಮೆಯಾಗಿರುವ ಕಾರಣ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ. ಯಾರು ಬೆಳೆ ಬೆಳೆಯಬಾರದು ಎಂದು ಅಧಿಸೂಚನೆ ಹೊರಡಿಸಿದ ಸರ್ಕಾರ ಈ ಭಾಗದ ಎಲ್ಲ ತಾಲೂಕು ಬರಗಾಲ ಎಂದು ಘೋಷಣೆ ಮಾಡಿದೆ.
ಇದೇ ಸರ್ಕಾರ ಬರಗಾಲದ ಬೆಳೆ ನಷ್ಟ ಅಂದಾಜು ಸಮೀಕ್ಷೆ ಮಾಡಿ ವರದಿ ಕಳಿಸಿ ಎಂದು ಸೂಚಿಸಿದೆ. ಈ ಕಾರಣ ಕಾವೇರಿ ಅಚ್ಚುಕಟ್ಟು ಭಾಗದ ಬಹುತೇಕ ರೈತರಿಗೆ ಬರ ಪರಿಹಾರ ನಷ್ಟ ಸಿಕ್ಕಿಲ್ಲ ಇದು ಸರ್ಕಾರದ ಇಬ್ಬಗೆ ನೀತಿಯಾಗಿದೆ ಎಂದು ಖಂಡಿಸಿದರು.
ಜಿಲ್ಲೆಯಾದ್ಯಂತ ಮಳೆ ಹಾಗೂ ಬಿರುಗಾಳಿ ಹಾನಿಯಿಂದ ರೈತರ ಬಾಳೆ ಬೆಳೆ, ತರಕಾರಿ, ಬೆಳೆಗಳ ನಷ್ಟ ಪರಿಹಾರವನ್ನು ವಿಪ್ಪತು ನಿರ್ವಹಣಾ ಪ್ರಾಧಿಕಾರದಿಂದ ಕೂಡಲೆ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ, ತಾಲೂಕ ಅಧ್ಯಕ್ಷ ಕುರುಬೂರು ಸಿದ್ದೇಶ್, ಜಂಟಿ ಕಾರ್ಯದರ್ಶಿ ಪರಶಿವಮೂರ್ತಿ, ಪ್ರಸಾದ್ ನಾಯಕ್, ಪ್ರದೀಪ್, ಅಪ್ಪಣ್ಣ ರಾಜೇಶ್, ಉಮೇಶ್, ನಿಂಗರಾಜು, ರೂಪ ಮುಡುಕನಪುರ, ಕುಮಾರ್, ಬನ್ನೂರು ಸೂರಿ ಇನ್ನು ಮುಂತಾದವರು ಇದ್ದರು.