ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು 6ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ 42 ನೇ ಎಸಿಎಂಎಂ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಧೀಶ ಕೆ.ಎನ್.ಶಿವಕುಮಾರ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್ ಇಂದಿನಿಂದ ಜೂನ್ 6ರವರೆಗೂ ಎಸ್ಐಟಿ ಕಸ್ಟಡಿಗೆ ನೀಡಿದೆ. ಗುರುವಾರ ರಾತ್ರಿ ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸಿದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣನನ್ನ SIT ಅಧಿಕಾರಿಗಳು ಬಂಧಿಸಿದ್ದರು. ಇಂದು ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ನ್ಯಾಯಧೀಶರ ಮುಂದೆ ಹಾಜರು ಪಡಿಸಲಾಗಿತ್ತು.
ಈ ವೇಳೆ ವಿಚಾರಣೆ ನಡಸಿದ ನ್ಯಾಯಧೀಶ ಕೆ.ಎನ್.ಶಿವಕುಮಾರ್ ಅವರ ಏಕಸದಸ್ಯ ನ್ಯಾಯಪೀಠ ಎರಡು ಕಡೆಯ ವಾದ ಪ್ರಿವಾದಗಳನ್ನು ಆಲಿಸಿತು. ಎಸ್ಐಟಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಿತ್ತು. ಇದಕ್ಕೆ ಪ್ರಜ್ವಲ್ ರೇವಣ್ಣ ಪರ ವಕೀಲರಾದ ಅರುಣ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಜಾಮೀನು ನೀಡುವಂತೆ ವಾದ ಮಂಡಿಸಿದರು.
ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸುತ್ತಿದ್ದಂತೆ ಎಸ್ಐಟಿ ಪ್ರಕರಣದ ಕೇಸ್ ಡೈರಿ (ಸಿಡಿ) ಕೋರ್ಟ್ಗೆ ಸಲ್ಲಿಸಿತು. ಆಗ ನ್ಯಾಯಾಧೀಶರಾದ ಕೆ.ಎನ್. ಶಿವಕುಮಾರ್ ಅವರು ಆರೋಪಿಯನ್ನು ಹಾಜರು ಪಡಿಸಲು ಸೂಚಿಸಿದ್ದರು. ಇಂದು ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ನ್ಯಾಯಾಲಯ ಸೂಚಿಸಿತ್ತು.
ಕೋರ್ಟ್ ಕಟಕಟೆಯಲ್ಲಿ ನಿಂತ ಪ್ರಜ್ವಲ್ ರೇವಣ್ಣ ಅವರನ್ನು ಜಡ್ಜ್ ಮೊದಲಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ನಿಮ್ಮ ಹೆಸರೇನು? ಅಂತ ಕೇಳಿದ ಪ್ರಶ್ನೆಗೆ ಪ್ರಜ್ವಲ್ ರೇವಣ್ಣ ಅವರು ಉತ್ತರ ನೀಡಿದ್ದಾರೆ. ಇದೇ ವೇಳೆ ನಿಮಗೇನಾದ್ರೂ ಟಾರ್ಚರ್ ಆಯ್ತಾ? ನಿಮ್ಮನ್ನು ಬಂಧಿಸಿರುವ ವಿಷಯವನ್ನು ನಿಮ್ಮ ತಂದೆ-ತಾಯಿಗೆ ತಿಳಿಸಿದ್ರಾ ಎಂದು ಜಡ್ಜ್ ಪ್ರಶ್ನಿಸಿದ್ದಾರೆ.
ಜಡ್ಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್ ರೇವಣ್ಣ ಅವರು ಇಲ್ಲ ಟಾರ್ಚರ್ ಏನು ಆಗಿಲ್ಲ. ಆದರೆ ಎಸ್ಐಟಿ ಕಚೇರಿಯ ಶೌಚಾಲಯದ ಬಗ್ಗೆ ಪ್ರಜ್ವಲ್ ರೇವಣ್ಣ ದೂರು ನೀಡಿದರು. ಎಸ್ಐಟಿಯಲ್ಲಿರುವ ಶೌಚಾಲಯದಲ್ಲಿ ತುಂಬಾ ವಾಸನೆ ಇದೆ ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಅವರ ಈ ಮಾತು ಕೇಳಿ ಕೋರ್ಟ್ ಹಾಲ್ನಲ್ಲಿದ್ದ ಕೆಲವರು ನಕ್ಕರು. ಆಗ ಜಡ್ಜ್ ಎಲ್ಲರೂ ಸುಮ್ಮನಿರಲು ಸೂಚನೆ ನೀಡಿದರು.
ಇದೇ ವೇಳೆ ಎಸ್ಐಟಿ ಕಸ್ಟಡಿಯಲ್ಲಿರುವಾಗ ಮನೆಯೂಟ ನೀಡಲು ಪ್ರಜ್ವಲ್ ರೇವಣ್ಣ ಪರ ವಕೀಲರು ಮನವಿ ಮಾಡಿದ್ದಾರೆ. ಇದಕ್ಕೆ ಎಸ್ಐಟಿ ಅಧಿಕಾರಿಗಳು ಮನೆಯೂಟ ಬೇಡ. ಅದಕ್ಕೆ ನಾವೇ ಊಟ ಕೊಡ್ತೀವಿ ಎಂದು ಹೇಳಿದ್ದಾರೆ.
ಇನ್ನು 6ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡುವ ಆದೇಶ ಮಾಡುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಮಾಧ್ಯಮಗಳು ಎಸ್ಐಟಿ ಅಧಿಕಾರಿಗಳು ಮಾಡುವ ವಿಚಾರಣೆಯನ್ನು ಪ್ರಸಾರ ಮಾಡದಂತೆ ತಡೆನೀಡಬೇಕು ಎಂದು ಕೋರ್ಟ್ಗೆ ಮನವಿ ಮಾಡಿದರು.
ಆದರೆ ಈ ಬಗ್ಗೆ ನಾವು ಆದೇಶ ಮಾಡಲು ಬರುವುದಿಲ್ಲ ನಿಮ್ಮ ವಕೀಲರ ಮೂಲಕ ಮನವಿ ಸಲ್ಲಿಸಿ ಬಳಿಕ ನೋಡೋಣ ಎಂದು ಹೇಳಿದರು.
ಎಸ್ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯಕ್ ಮತ್ತು ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ವಾದ ಪ್ರತಿವಾದ ಮಂಡಿಸಿದರು.
ಬೌರಿಂಗ್ ಆಸ್ಪತ್ರೆಯ ಡಾಕ್ಟರ್ ಧನಂಜಯ್ ಸಿ.ಎಂ. ಅವರು ಪ್ರಜ್ವಲ್ ಅವರ ವೈದ್ಯಕೀಯ ಪರೀಕ್ಷೆ ಮಾಡಿದ್ದರು. ಪ್ರಜ್ವಲ್ ಅವರ ಆರೋಗ್ಯ ಸ್ಥಿರವಾಗಿದೆ. ಬಿಪಿ, ಶುಗರ್, ಇಸಿಜಿ & ಹಾರ್ಟ್ ಬೀಟ್ ರೇಟ್ ಚೆಕಪ್ ಮಾಡಿ ಅವರ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ, ಆರೋಗ್ಯದ ಸ್ಥಿತಿ ಚೆನ್ನಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಎಸ್ಐಟಿಗೆ ವರದಿ ನೀಡಿದ ಬಳಿಕವೇ ಕೋರ್ಟ್ಗೆ ಪ್ರಜ್ವಲ್ ಅವರನ್ನ ಹಾಜರು ಪಡಿಸಲಾಗಿಯಿತು.