ಕಲಬುರಗಿ: ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನೀರಿಲ್ಲದೇ ಶಸ್ತ್ರಚಿಕಿತ್ಸೆ ಸ್ಥಗಿತ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಇಂದು ಆಸ್ಪತ್ರೆಗೆ ಭೇಟಿ ನೀಡಿಸ ಅವರು, ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿ ನೀರಿಲ್ಲ ಎಂದರೆ ಹೇಗೆ ಎಂದು ವೈದ್ಯರನ್ನು ಪ್ರಶ್ನಿಸಿದರು. ನೀರಿನ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ ಮುಂದೂಡಿದ್ದಾರೆ ಎಂದು ವರದಿಯಾಗಿದೆ ಎಂದರೆ ಸರ್ಕಾರ ಈ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ವಹಿಸುತ್ತಿದೆ, ವೈದ್ಯಧಿಕಾರಿಗಳ ಬೇಜವಾಬ್ದಾರಿ ಎಂಥದ್ದು ಎಂಬುವುದು ತಿಳಿಯುತ್ತಿದೆ ಎಂದು ಗರಂ ಆದರು.
ಕಲಬುರಗಿ ಜಯದೇವ ಆಸ್ಪತ್ರೆಯಲ್ಲಿನ ಅಧ್ವಾನದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ ಎಂದರೆ ಇದರ್ಥ ಏನು? ನಿಮಗೆ ಜವಾಬ್ದಾರಿ ಇದೆಯೇ. ಇನ್ನು ಅಚ್ಚರಿ ಎಂದರೆ ಶಸ್ತ್ರಚಿಕಿತ್ಸೆಯನ್ನೇ ಸ್ಥಗಿತ ಮಾಡಿರುವುದು. ಒಂದು ವೇಳೆ ರೋಗಿಗಳ ಜೀವಕ್ಕೆ ತೊಂದರೆ ಆದರೆ ಅದಕ್ಕೆ ಆ ಹೊಣೆಯನ್ನು ಯಾರು ಹೊರುತ್ತಾರೆ ಎಂದು ಅಶೋಕ್ ಕಿಡಿಕಾರಿದರು.
ತಕ್ಷಣವೇ ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯುತ್ತೇನೆ. ಜತೆಗೆ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವಿಧಾನಸೌಧದಲ್ಲಿ ಪ್ರಶ್ನಿಸುತ್ತೇನೆ ಎಂದು ಅಶೋಕ್ ಹೇಳಿದರು.
ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನೀರಿನ ಕೊರತೆಯ ನೆಪವೊಡ್ಡಿ ಮೂರು ದಿನಗಳಿಂದ ಶಸ್ತ್ರಚಿಕಿತ್ಸೆಯನ್ನೇ ಸ್ಥಗಿತಗೊಳಿಸಲಾಗಿತ್ತು. ನೀರಿನ ಕೊರತೆಯ ಕಾರಣ ಅತೀ ತುರ್ತು ಎನ್ನಿಸುವಂಥ ಶಸ್ತ್ರಚಿಕಿತ್ಸೆ ಹೊರತುಪಡಿಸಿ ಸಂಪೂರ್ಣವಾಗಿ ಆಪರೇಷನ್ ಥಿಯೇಟರ್ ಬಂದ್ ಮಾಡಲಾಗಿತ್ತು.
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ತವರು ಜಿಲ್ಲೆಯಲ್ಲಿಯೇ ಈ ರೀತಿ ಆಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ವಿಪಕ್ಷ ನಾಯಕರೂ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಡಿಸಿಎಂ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.