ಶ್ರೀನಗರ: 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರ ತೀರದಲ್ಲಿ ಸಾವಿರಾರು ಜನರೊಂದಿಗೆ ಯೋಗ ಮಾಡಿದರು.
ಈ ಬಾರಿ ಯೋಗ ದಿನವನ್ನು ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ವಸ್ತು ವಿಷಯದಡಿ ಆಚರಿಸಲಾಗುತ್ತಿದೆ. ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಸೆಯುವಲ್ಲಿ ಯೋಗದ ಪಾತ್ರದ ಮಹತ್ವ ತೋರಿಸುವುದು ಇದರ ಉದ್ದೇಶವಾಗಿದೆ.
3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಮೋದಿ, ಶ್ರೀನಗರದ ದಾಲ್ ಸರೋವರ ತೀರದ ಶೇರ್-ಐ-ಕಾಶ್ಮೀರ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಯೋಗ ಮಾಡಿದರು. ಇವರೊಂದಿಗೆ ಸರಿಸುಮಾರು 7 ಸಾವಿರ ಮಂದಿ ಪಾಲ್ಗೊಂಡು ವಿಶ್ವಕ್ಕೆ ಆರೋಗ್ಯ ಜಾಗೃತಿಯ ಸಂದೇಶ ಸಾರಿದರು.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಸುರಕ್ಷತಾ ಕ್ರಮ ಕೈಗೊಳ್ಳಲಾಗಿತ್ತು. ಭದ್ರತಾ ಕ್ರಮದ ಭಾಗವಾಗಿ ಶ್ರೀನಗರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಡ್ರೋನ್ (Drone) ಮತ್ತು ಕ್ವಾಡ್ಕ್ಯಾಪ್ಚರ್ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು.
ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಎಲ್ಲ 20 ಜಿಲ್ಲೆಗಳಲ್ಲೂ ವರ್ಚುವಲ್ ವೇದಿಕೆಯನ್ನು ಕಲ್ಪಿಸಲಾಗಿತ್ತು. ವರ್ಚುವಲ್ನಲ್ಲೂ ಪ್ರತಿ ಜಿಲ್ಲೆಯಿಂದ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.