ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜೂನ್ 29ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರನ್ನು ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿ 1-1- 2020ರ ವೇತನ ಪರಿಷ್ಕರಣೆಯ ವೇತನವನ್ನು ನಿವೃತ್ತ ನೌಕರರಿಗೆ ವಿಸ್ತರಣೆ ಮಾಡಿ ಆದೇಶ ಮಾಡಿರುವುದಕ್ಕೆ ನಿಮಗೆ ಅಭಿನಂದನೆಗಳು ಎಂದು ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ.
ಅಂದರೆ, ಸಾರಿಗೆ ಸಚಿವರು ಮತ್ತು ಸಂಸ್ಥೆಯ ಎಂಡಿ ಅವರ ಮನೆಯಿಂದ ಏನಾದರೂ ನಿವೃತ್ತ ನೌಕರರಿಗೆ ಪುಕ್ಕಟೆಯಾಗಿ ಅಥವಾ ದಾನವಾಗಿ ಹಣ ಕೊಡುತ್ತಿದ್ದಾರೆಯೇ? ನಿವೃತ್ತಿಗೂ ಮುನ್ನ ಕರ್ತವ್ಯ ನಿರ್ವಹಿಸಿದ್ದಕ್ಕೆ ಪ್ರತಿಫಲವಾಗಿ ನಾಲ್ಕೂ ನಿಗಮಗಳ ಅಧಿಕಾರಿಗಳಿಗೆ ಮತ್ತು ನೌಕರರಿಗೆ ನ್ಯಾಯಯುತವಾಗಿ ಕೊಡಬೇಕಿರುವುದನ್ನು ಆದೇಶ ಮಾಡಿದ್ದಾರೆ ಅಲ್ಲವೇ?
ಇದರಲ್ಲಿ ಸಾರಿಗೆ ಸಚಿವರಿಗೆ ಮತ್ತು ಎಂಡಿ ಅವರಿಗೆ ಅಭಿನಂದನೆ ಸಲ್ಲಿಸುವುದು ಏನಿದೆ. ನಮಗಂತು ಗೊತ್ತಾಗುತ್ತಿಲ್ಲ ಎಂದು ನಿವೃತ್ತ ಅಧಿಕಾರಿಗಳು ಮತ್ತು ನೌಕರರು ಜಂಟಿ ಕ್ರಿಯಾ ಸಮಿತಿಯ ನಡೆಗೆ ಒಂದು ರೀತಿಯ ಮರುಕ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರಮುಖವಾಗಿ ಈಗಾಗಲೇ ಸರ್ಕಾರ ವೇತನ ಹಿಂಬಾಕಿ ನೀಡುವ ಸಂಬಂಧ 220 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಅದನ್ನು ನೌಕರರ ಬ್ಯಾಂಕ್ ಖಾತೆಗೆ ಹಾಕಬೇಕು. ಅದನ್ನು ಹಾಕುವುದಕ್ಕೆ ಪರಿಶೀಲನೆ ಮಾಡಲು 93 ದಿನಗಳವರೆಗೆ ಕಾಲಾವಕಾಶಕೊಟ್ಟಿದ್ದಾರೆ ನಮ್ಮ ಎಂಡಿ ಸಾಹೇಬರು. ಏಕೆ ಒಂದು ವಾರದಲ್ಲಿ ಮುಗಿಯುವ ಕೆಲಸಕ್ಕೆ 93 ದಿನಗಳ ವರೆಗೆ ಗಡುವು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಈ ಬಗ್ಗೆ ಕೇಳಿ ಸಾರಿಗೆ ಸಚಿವರು ಮತ್ತು ಎಂಡಿ ಅವರನ್ನು ತರಾಟೆಗೆ ತೆಗೆದುಕೊಂಡು ಶೀಘ್ರದಲ್ಲೇ ಎಲ್ಲಾ ನೌಕರರ ಬ್ಯಾಂಕ್ ಖಾತೆಗೆ ಸಲ್ಲಬೇಕಿರುವುದನ್ನು ಹಾಕಿ ಎಂದು ತಾಕೀತು ಮಾಡಬೇಕಿತ್ತು ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು. ಆದರೆ, ಮಾಡುವ ಕೆಲಸ ಮಾಡದೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ಯಾವ ಪುರುಷಾರ್ಥಕ್ಕೊ ಎಂದು ಪ್ರಶ್ನಿಸಿದ್ದಾರೆ.
ಇನ್ನು ಇದೇ ರೀತಿ ಶೇ.15ರಷ್ಟು ವೇತನ ಹೆಚ್ಚಳ ಮಾಡಿರುವುದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿಕೊಂಡೇ ನಿಕಟಪೂರ್ವ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿಗೆ ಓಡಿಹೋಗಿ ಹೂಗುಚ್ಛ ನೀಡಿ ಅಭಿನಂದಿಸಲಾಗಿತ್ತು. ಆ ವೇಳೆ ಸಮಸ್ತ ಸಾರಿಗೆ ನೌಕರರ ಕೆಂಗಣ್ಣಿಗೆ ಗುರಿಯಾಗಿದ್ದರು ಈ ಜಂಟಿ ಸಮಿತಿ ಪದಾಧಿಕಾರಿಗಳು. ಈಗಲೂ ಸಹ ಅದೇ ರೀತಿ ನಡೆದುಕೊಂಡು ಮತ್ತೊಮ್ಮೆ ನಿವೃತ್ತ ನೌಕರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಲ್ಲದೆ ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವರು ನೌಕರರ ಪರವಾಗಿ ಹೋರಾಟ ಮಾಡುತ್ತಿದ್ದಾರೋ ಇಲ್ಲ ಆಡಳಿತ ನಡೆಸುವ ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿ ಪರವಾಗಿ ಕೆಲಸ ಮಾಡುತ್ತಿದ್ದಾರೋ ಎಂಬ ಡೌಟ್ ಬರುತ್ತಿದೆ ಎಂದು ಮೈಸೂರು ಭಾಗದ ನಿವೃತ್ತ ನೌಕರರು ಪ್ರಶ್ನಿಸಿದ್ದಾರೆ.
ಇನ್ನು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳೊಬ್ಬರು ನಿವೃತ್ತ ನೌಕರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ನಿಮಗೆ ಇದನ್ನು ಕೊಡುತ್ತಿರುವುದೇ ಹೆಚ್ಚು ನಾವು ಇದನ್ನು ಕೊಡುವುದು ಬೇಡ ಎಂದು ಹೇಳಬೇಕಿತ್ತು. ಕಾರಣ ಕೊರೊನಾ ವೇಳೆ ಯಾರು ಕೆಲಸವನ್ನೇ ಮಾಡಿಲ್ಲ ಎಂದು ಅವರ ಮನೆಯಿಂದ ನೌಕರರಿಗೆ ಹಣ ತೆಗೆದುಕೊಂಡು ಬಂದು ಕೊಡುತ್ತಿರುವವರ ರೀತಿ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಇದು ಇವರಿಗೆ ಶೋಭೆ ತರುತ್ತದೆಯೇ ಎಂಬುದನ್ನು ಅಧಿಕಾರಿಗಳು ಮತ್ತು ನೌಕರರೆ ತೀರ್ಮಾನಿಸಬೇಕಿದೆ ಎಂದು ಆ ಪದಾಧಿಕಾರಿಗೆ ಫೋನ್ ಮಾಡಿದ್ದ ನಿವೃತ್ತ ನೌಕರರೊಬ್ಬರು ಹೇಳಿದ್ದಾರೆ.