ಪಿರಿಯಾಪಟ್ಟಣ: ಲಘು ವಾಹನಗಳು ಸರಕುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಣೆ ಮಾಡಲು ಮತ್ತು ರೈತರು ಹಾಗೂ ಮಧ್ಯಮ ವರ್ಗ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸಹಕಾರಿಯಗಲಿವೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗ ನೂತನವಾಗಿ ವಾಹನಗಳ ಸೇಲ್ಸ್ ಅಂಡ್ ಸರ್ವಿಸಸ್ ಮಳಿಗೆ ಉದ್ಘಾಟಿಸಿ ಮಾತನಾಡಿದರು.
ಅಶೋಕ್ ಲೇಲ್ಯಾಂಡ್ ಕಂಪನಿ ಲಘು ಮತ್ತು ಬಾರಿ ವಾಹನಗಳ ತಯಾರಿಕೆಯಲ್ಲಿ ಅತ್ಯಂತ ಪ್ರಮುಖವಾಗಿದ್ದು, ಇದು ರೈತರ ಹಾಗೂ ಮಧ್ಯಮ ವರ್ಗದ ಜನರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗಿದೆ. ರೈತರು ಬೆಳೆದ ಬೆಳೆಗಳನ್ನು ಜಮೀನಿನಿಂದ ಮಾರುಕಟ್ಟೆಗೆ ಸಾಗಣೆ ಮಾಡಲು ಬೇರೆಯವರನ್ನು ಅವಲಂಬಿಸುವ ಬದಲಾಗಿ ತಾವೇ ಲಘು ಪ್ರಮಾಣದ ವಾಹನವನ್ನು ಖರೀದಿ ಮಾಡುವ ಮೂಲಕ ಸಾಗಣೆ ವೆಚ್ಚ ಮತ್ತು ತಮ್ಮ ಬೆಳೆಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು ಎಂದರು.
ಕಂಪನಿ ಪ್ರಾಂತೀಯ ವ್ಯವಸ್ಥಾಪಕ ಪ್ರೀತಂ ಕೃಷ್ಣಮೂರ್ತಿ ಮಾತನಾಡಿ, ದೇಶದ ಅಭಿವೃದ್ಧಿಗೆ ನಮ್ಮ ಕಂಪನಿಯು ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಅನೇಕ ರೀತಿಯ ಭಾರಿ ಮತ್ತು ಲಘು ವಾಹನಗಳ ತಯಾರಿಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಮಾಲೀಕ ಸುಬ್ರಹ್ಮಣ್ಯ ಮಾತನಾಡಿ, ಈ ವಾಹನಗಳು ಬಹಳ ವರ್ಷಗಳಿಂದಲೂ ತಮ್ಮ ಭರವಸೆ ಹಾಗೂ ದೃಢತೆಯನ್ನು ಕಾಪಾಡಿಕೊಂಡು ಬಂದಿವೆ. ಮೈಸೂರು ಮತ್ತು ಕೊಡಗು ಜಿಲ್ಲೆಯ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಿರಿಯಾಪಟ್ಟಣದಲ್ಲಿ ಇದರ ಶಾಖೆಯನ್ನು ತೆರೆಯಲಾಗಿದ್ದು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ತಂಬಾಕು ಮಂಡಳಿ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಅಶೋಕ್ ಲೈಲ್ಯಾಂಡ್ ಶೋ ರೂಂ ಮಾಲೀಕ ವಿಟ್ಲ ಹರೀಶ್, ರೋಟರಿ ಮಿಡ್ ಟೌನ್ ಅಧ್ಯಕ್ಷ ಎಂ.ಎಂ.ರಾಜೇಗೌಡ, ತೆಲುಗಿನ ಕುಪ್ಪೆ ನಾಗಣ್ಣ ಸೇರಿದಂತೆ ಕಂಪನಿಯ ಸಿಬ್ಬಂದಿಗಳು ಇದ್ದರು.