ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಒದಗಿಸಿದ ಶಕ್ತಿ ಯೋಜನೆ ದುರುಪಯೋಗವಾಗುತ್ತದೆ ಎಂಬ ಆರೋಪ ಕೇಳಿಬಂದಿದೆ.
ಅಂದರೆ, ಮಹಿಳಾ ಪ್ರಯಾಣಿಕರು ಇಲ್ಲದೇ ಇದ್ದರೂ ಟಿಕೆಟ್ ಹರಿಯುವುದು, ಒಂದಕ್ಕಿಂತ ಹೆಚ್ಚು ಟಿಕೆಟ್ ನೀಡಿ ದುಡ್ಡು ಮಾಡುವ ಕೃತ್ಯ ನಡೆಸುತ್ತಿದ್ದಾರೆ ನಿರ್ವಾಹಕರು ಎಂಬ ಬಗ್ಗೆ ದೂರುಗಳು ಕೇಳಿಬಂದಿದ್ದು, ಹೀಗಾಗಿ ಆ ರೀತಿ ಹೆಚ್ಚುವರಿ ಟಿಕೆಟ್‌ಗಳನ್ನು ಸುಖ ಸುಮ್ಮನೆ ಹರಿಯುವಂಥ ನಿರ್ವಾಹಕರ ವಿರುದ್ಧ ತಂಡ ಸಹಿತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇಲ್ಲದಿದ್ದರೂ ಹೆಚ್ಚು ಟಿಕೆಟ್ ವಿತರಣೆ ಮಾಡಲಾಗುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಕೆಎಸ್ಆರ್ಟಿಸಿ ಸೇರಿದಂತೆ 4 ಸಾರಿಗೆ ನಿಗಮಗಳ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ನಿರ್ವಾಹಕರಿಗೆ ಎಚ್ಚರಿಕೆ ನೀಡಿದ್ದಾರೆ. ಜತೆಗೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಈಗಾಗಲೇ ಆದೇಶ ಹೊರಡಿಸಿವೆ.
ಇನ್ನು ಇಲ್ಲಿ ಪ್ರಮುಖವಾಗಿ ಮಹಿಳೆಯರಿಗೆ ಉಚಿತ ಟಿಕೆಟ್ ನೀಡದಿದ್ದರೂ ಕಂಡಕ್ಟರ್ಗಳು ದಂಡ ಕಟ್ಟಬೇಕು. ಅಲ್ಲದೆ ಹೆಚ್ಚು ಟಿಕೆಟ್‌ಗಳನ್ನು ಹರಿದರೂ ಕಂಡಕ್ಟರ್ಗಳು ಶಿಕ್ಷೆ ಅನುಭವಿಸಬೇಕು. ಜತೆಗೆ ಮಹಿಳೆಯರು ಉಚಿತ ಟಿಕೆಟ್ ಪಟಡೆದಿಲ್ಲ ಎಂದರೆ ಅವರ ವಿರುದ್ಧ ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂಬ ಆದೇಶವನ್ನು ಕೆಕೆಆರ್ಟಿಸಿ ಈಗಾಗಲೇ ಹೊರಡಿಸಿದೆ.
ಈ ಆದೇಶದಲ್ಲಿ ಸರಿ ತಪ್ಪುಗಳು ಎರಡು ಇವೆ. ಅಂದರೆ ಇಲ್ಲಿ ಗರಗದ ಬಾಯಿ ಸಿಲುಕುವುದು ನಿರ್ವಾಹಕರು ಮಾತ್ರ. ಟಿಕೆಟ್ ಪಡೆಯದಿರುವ ಮಹಿಳೆಯರಿಗೆ ಯಾವುದೇ ರೀತಿ ದಂಡವಿಲ್ಲ ಎಂದಾದರೆ ಎಷ್ಟೋ ಜನ ಮಹಿಳೆಯತು ಉದಾಸೀನತೆಯಿಂದ ನಡೆದುಕೊಳ್ಳುತ್ತಾರೆ. ಜತೆಗೆ ನಿರ್ವಾಹಕರನ್ನು ಕೀಳಾಗಿ ಕಾಳುತ್ತಾರೆ ಎಂಬ ಬಗ್ಗೆ ಈ ಆದೇಶ ಹೊರಡಿಸಿರುವ ಅಧಿಕಾರಿಗೆ ಕಿಂಚಿತ್ತು ಅರಿವಿಲ್ಲ ಎಂಬಂತೆ ಕಾಣುತ್ತಿದೆ.
ಇನ್ನು ನಿರ್ವಾಹಕರಿಗೆ ನೀಡುವ ಶಿಕ್ಷೆ ಏನು?: ಉಚಿತ ಮಹಿಳಾ ಟಿಕೆಟ್ ಪ್ರಕರಣದಲ್ಲಿ ಸಾರಿಗೆ ನಿಗಮದ ನಿಯಮ 22ರಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದು. 2 ಕ್ಕಿಂತ ಹೆಚ್ಚಿನ ಉಚಿತ ಮಹಿಳಾ ಟಿಕೆಟ್ ಪ್ರಕರಣದಲ್ಲಿ ಸೋರಿಕೆ ಮೊತ್ತದ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದು. ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸದೇ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದು.
2 ಕ್ಕಿಂತ ಹೆಚ್ಚಿನ ಟಿಕೆಟ್ ನೀಡದೇ ಇರುವ ಪಕ್ಷದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವುದು. ಇಂತಹ ಪ್ರಕರಣದಲ್ಲಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡದೇ, ನ್ಯೂನ್ಯತೆಗಳ ವಿವರಗಳೊಂದಿಗೆ ನಿರ್ವಾಹಕರಿಗೆ ಮೆಮೋ ನೀಡಿ ಕ್ರಮಕೈಗೊಳ್ಳುವುದು ಎಂದು ಆದೇಶ ಹೊರಡಿಸಿದ್ದಾರೆ. ಇದು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ನಿರ್ವಾಹಕರ ಮೇಲೆ ಕೆಲ ಮಹಿಳಾ ಪ್ರಯಾಣಿಕರು ದರ್ಪ ತೋರುವುದಕ್ಕೆ ಅನುಕೂಲ ಮಾಡಿಕೊಟ್ಟಂತೆ ಇದೆ.
ಇನ್ನು ಶಕ್ತಿ ಯೋಜನೆ ಜಾರಿಯ ನಂತರ ರಾಜ್ಯದ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದಾರೆ. ನಂತರದಲ್ಲಿ ಶಕ್ತಿ ಯೋಜನೆ ದುರುಪಯೋಗವಾಗುತ್ತಿರುವ ಬಗ್ಗೆಯೂ ಆರೋಪಗಳು ಕೇಳಿಬಂದವು. ಇದರ ಬೆನ್ನಲ್ಲೇ ನಿಗಮಗಳು ಈಗ ಸಂಸ್ಥೆಯ ನೌಕರರಿಗೆ ಮಾತ್ರ ಬರೆಹಾಕಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದಕ್ಕೆ ಆದೇಶ ಹೊರಡಿಸಿರುವ ಅಧಿಕಾರಿಯೇ ಸ್ಪಷ್ಟನೆ ನೇಡಬೇಕಿದೆ.