ತುಮಕೂರು: ರಾಜಕೀಯ ಮೇಲಾಟಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳು ಬಡವಾಗುತ್ತಿದ್ದು, ಯಾವ ನಿಗಮವೂ ಲಾಭದಲ್ಲಿ ಇಲ್ಲ ಎಂದು KSRTC ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ (ವಾಸು) ಬೇಸರ ವ್ಯಕ್ತಪಡಿಸಿದ್ದಾರೆ.
ಅವರು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವಾರ್ಷಿಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
‘KSRTC ಸೇರಿದಂತೆ ಯಾವುದೇ ಸಾರಿಗೆ ನಿಗಮಕ್ಕೂ ನೌಕರರೇ ಆಧಾರ ಸ್ತಂಭ. ನೌಕರರ ಶ್ರಮದಿಂದ ನಿಗಮಗಳು ಸುಸೂತ್ರವಾಗಿ ನಡೆಯುತ್ತಿವೆ. ಆದರೆ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಇದು ತುಂಬ ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಡೀಸೆಲ್ ದರ 60 ರೂಪಾಯಿ ಇದ್ದಾಗ ಬಸ್ ಪ್ರಯಾಣದ ಟಿಕೆಟ್ ದರ ಹೆಚ್ಚಿಸಲಾಗಿತ್ತು. ನಂತರ ಅಂದರೆ ಇದುವರೆಗೂ ಟಿಕೆಟ್ ದರ ಏರಿಕೆ ಮಾಡಿಲ್ಲ. ಇದು ಕೂಡ ಸಂಸ್ಥೆಗಳು ಆರ್ಥಿಕವಾಗಿ ದುರ್ಬಲಗೊಳ್ಳಲು ಒಂದು ಕಾರಣವಾಗಿದೆ ಎಂದ ಹೇಳಿದರು.
ಇನ್ನು ನೌಕರರಿಗೆ ಅಗತ್ಯ ಸವಲತ್ತು ಕಲ್ಪಿಸುವ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜತೆ ಮಾತನಾಡುತ್ತೇನೆ. ಆಗಿರುವ ನ್ಯೂನತೆ ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ತುಮಕೂರು, ಶಿರಾ, ತುರುವೇಕೆರೆ, ತಿಪಟೂರು, ಮಧುಗಿರಿ ಸೇರಿದಂತೆ 7 ಘಟಕಗಳ ಚಾಲಕರು, ನಿರ್ವಾಹಕರು, ಕಚೇರಿ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು.
ಓಟ, ಗುಂಡು ಎಸೆತ, ಜಾವೆಲಿನ್ ಎಸೆತ, ಉದ್ದ ಜಿಗಿತ, ರಿಲೇ, ವಾಲಿಬಾಲ್ ಒಳಗೊಂಡಂತೆ ಇತರೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್, ಸಂಚಲನಾಧಿಕಾರಿ ಬಸವರಾಜು, ತಾಂತ್ರಿಕ ಶಿಲ್ಪಿ ಅಶ್ರಫ್‌ವುಲ್ಲಾ ಷರೀಫ್, ಕಾರ್ಮಿಕರ ಕಲ್ಯಾಣಾಧಿಕಾರಿ ಹಂಸವೀಣಾ, ಕಾನೂನು ಅಧಿಕಾರಿ ಕವಿತಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ಇತರರು ಇದ್ದರು.