ಗದಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ಕೊಡಬೇಕು. ಜತೆಗೆ 38 ತಿಂಗಳ ವೇತನ ಹೆಚ್ಚಳದ ಶೇ.15ರಷ್ಟು ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಾರಿಗೆ ನೌಕರರ ಪರವಾಗಿ ರೋಣದಿಂದ ಬೆಂಗಳೂರುವರೆಗೆ ಆರಂಭಿಸಿದ್ದ ಪಾದಯಾತ್ರೆ ಒಂದು ದಿನದ ಬಳಿಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಹೌದು! ಗದಗ ಜಿಲ್ಲೆಯ ರೋಣದಿಂದ ಬೆಂಗಳೂರು ವಿಧಾನಸೌಧದ ವರೆಗೂ ಅಂದರೆ ಸುಮಾರು 500 ಕಿಮೀವರೆಗೆ ಪಾದಯಾತ್ರೆ ಹೊರಟಿದ್ದ ಆಧುನಿಕ ಗಾಂಧಿ ಮುತ್ತಣ್ಣ ಚ.ತಿರ್ಲಾಪುರ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ರೋಣದ ಬಸ್ ನಿಲ್ದಾಣದಿಂದ ಏಕಾಂಗಿಯಾಗಿ ಮುತ್ತಣ್ಣ ಚ.ತಿರ್ಲಾಪುರ ಅವರು ಆರಂಭಿಸಿದ ಪಾದಯಾತ್ರೆ 23 ಕಿಮೀ ಕ್ರಮಿಸಿ ನಾರಾಯಣಪುರ ಎಂಬಲ್ಲಿಗೆ ತಲುಪಿತು. ಅಂದು ಅಂದರೆ ಆ.10ರ ರಾತ್ರಿ ನಾರಾಯಣಪುರದ ದೇವಸ್ಥಾನವೊಂದರಲ್ಲಿ ತಂಗಿದ್ದರು. ಈ ವೇಳೆ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು.
ಇನ್ನು ಇದೇ ವೇಳೆ ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು, ನಮಗೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಸದ್ಯ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದೇವೆ. ಆದ್ದರಿಂದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಆರೋಗ್ಯ ಸರಿಯಾದ ಬಳಿಕ ಎಲ್ಲಿ ಪಾದಯಾತ್ರೆ ನಿಂತಿತೋ ಅಲ್ಲಿಂದಲೇ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾರಿಗೆ ನೌಕರರಿಗೆ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಆ.9ರಿಂದ ಗದಗ ಜಿಲ್ಲೆಯ ರೋಣ ಬಸ್‌ನಿಲ್ದಾಣದಿಂದ ಪಾದಯಾತ್ರೆ ಆರಂಭಿಸಲಾಗಿತ್ತು. ಅದೂ ಕೂಡ ಏಕಾಂಗಿಯಾಗಿ ಬೆಂಗಳೂರಿನ ವಿಧಾನಸೌಧದವರೆಗೂ ಹಮ್ಮಿಕೊಳ್ಳಲಾಗಿತ್ತು.
ಪಾದಯಾತ್ರೆಯ ಉದ್ದೇಶ ಸರ್ಕಾರ 2020ರ ವೇತನ ಪರಿಷ್ಕರಣೆಯ ಹೆಚ್ಚಳದ ಶೇ.15ರಷ್ಟು 38 ತಿಂಗಳ ವೇತನ ಹಿಂಬಾಕಿ ಕೊಡಬೇಕು. ಜತೆಗೆ ಇದೇ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆಯನ್ನು ಸರ್ಕಾರಿ ನೌಕರರಿಗೆ ಸರಿ ಸಮಾನವಾಗಿ ನೀಡಬೇಕು ಎಂಬುವುದು ಸೇರಿದಂತೆ ವಿವಿಧ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಪಾದಯಾತ್ರೆ ಆರಂಭವಾಗಿತ್ತು. ಆದರೆ ತಿರ್ಲಾಪುರ ಅವರ ಆರೋಗ್ಯ ಸರಿಯಿಲ್ಲದ ಕಾರಣ ಸ್ಥಗಿತಗೊಂಡಿದೆ.
ಇನ್ನು ಆಧುನಿಕ ಗಾಂಧಿ ಮುತ್ತಣ್ಣ ಚ.ತಿರ್ಲಾಪುರ ಅವರು ಸಾರಿಗೆ ನೌಕರರಿಗೆ ಕಾನೂನಾತ್ಮಕವಾಗಿ ಸಿಗಬೇಕಿರುವ ವೇತನ ಇನ್ನಿತರ ಸೌಲಭ್ಯಗಳನ್ನು ಕೂಡಲೇ ಕೊಡಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ಆರಂಭಿಸಿದ್ದರು. ಅದಕ್ಕೆ ನೌಕರರು ಸಾಥ್ ನೀಡಿದ್ದರು. ಆದರೆ, ಅಧಿಕಾರಿಗಳು ಮಾತ್ರ ಮೌನವಾಗಿದ್ದರು ಎಂಬುವುದು ನೋವಿನ ಸಂಗತಿ.