ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ತರಬೇತಿ ನೌಕರರ ತರಬೇತಿ ಭತ್ಯೆಯನ್ನು 14 ಸಾವಿರ ರೂಪಾಯಿಗೆ ಪರಷ್ಕರಿಸಿ ಇದೇ ಆ.1ರಿಂದ ಜಾರಿಗೆ ಬರುವಂತೆ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ನಿನ್ನೆ ಅಂದರೆ ಸೋಮವಾರ ಆ.19ರಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ಆದೇಶ ಹೊರಡಿಸಿದ್ದು, ಹುದ್ದೆವಾರು ಇದ್ದ ವೇತನ ತಾರತಮ್ಯತೆ ನಿವಾರಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತರಬೇತಿ ನೌಕರರಿಗೆ ಉಲ್ಲೇಖ-01 ರನ್ವಯ (ಸುತ್ತೋಲೆ ಸಂಖ್ಯೆ- 1558/2015, ದಿನಾಂಕ: 14-09-2015) ನಿಗದಿಪಡಿಸಲಾಗಿದ್ದ ತರಬೇತಿ ಭತ್ಯೆಯನ್ನು ಉಲ್ಲೇಖ-02 ರನ್ವಯ ( ಸುತ್ತೋಲೆ ಸಂಖ್ಯೆ – 1720/2024, ದಿನಾಂ: 30-01-2024) ತಾಂತ್ರಿಕ ಸಹಾಯಕ ಹುದ್ದೆಗೆ ಮಾತ್ರ ಪರಿಷ್ಕರಿಸಲಾಗಿತ್ತು.
ಆದರೆ ಪ್ರಸ್ತುತ ತರಬೇತಿ ಭತ್ಯೆ ನೀಡುವಲ್ಲಿ ಏಕರೂಪತೆ ಕಾಯ್ದುಕೊಳ್ಳುವ ಉದ್ದೇಶದಿಂದ ಇದೇ ಆಗಸ್ಟ್ 1-2024 ರಿಂದ ಜಾರಿಗೆ ಬರುವಂತೆ ಉಳಿದ ವೃಂದಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ತರಬೇತಿ ನೌಕರರಿಗೂ ಪ್ರತಿ ತಿಂಗಳೂ ಸಹ 14,000 ರೂ.ಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದ್ದಾರೆ.
ಇನ್ನು ಈ ಸಂಬಂಧ ವ್ಯವಸ್ಥಾಪಕ ನಿರ್ದೇಶಕರು, ಬೆಂ.ಮ.ನ.ಸಾ.ಸಂಸ್ಥೆ/ವಾ.ಕ.ರ.ಸಾ.ಸಂಸ್ಥೆ/ಈ.ಕ.ರ.ಸಾ.ಸಂಸ್ಥೆ ಅವರ ಮಾಹಿತಿಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ ಆದೇಶ ಪ್ರತಿಯನ್ನು ಕಳುಹಿಸಿದ್ದಾರೆ.
ಅಲ್ಲದೆ ನಿರ್ದೇಶಕರು (ಸಿಬ್ಬಂದಿ:ಜಾಗೃತ) ಕ.ರಾ.ರ.ಸಾ.ನಿಗಮ, ಕೇಂದ್ರ ಕಚೇರಿ, ಬೆಂಗಳೂರು ಅವರ ಮಾಹಿತಿಗಾಗಿ. ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರರು. ಕ.ರಾ.ರ.ಸಾ.ನಿಗಮ / ಬೆಂ.ಮ.ನ.ಸಾ.ಸಂಸ್ಥೆ/ ವಾ.ಕ.ರ.ಸಾ.ಸಂಸ್ಥೆ ಕ.ಕ.ರಾ.ನಿಗಮ ಅವರ ಮಾಹಿತಿಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ ಕಳುಹಿಸಿದ್ದಾರೆ.
ಇದರ ಜತೆಗೆ ಎಲ್ಲ ಹಿರಿಯ/ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು ಕೇಂದ್ರೀಯ/ಪ್ರಾದೇಶಿಕ ಕಾರ್ಯಗಾರ ಬೆಂಗಳೂರು /ಹಾಸನ, ಪ್ರಾಂಶುಪಾಲರು ಕೇಂದ್ರೀಯ/ಪ್ರಾದೇಶಿಕ ತರಬೇತಿ ಕೇಂದ್ರ ಬೆಂಗಳೂರು /ಹಾಸನ/ ಮಳವಳ್ಳಿ, ಹೊಳಲ್ಲೆರೆ ಮತ್ತು ಮಾಲೂರು ಅವರ ಮಾಹಿತಿಗಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ ಆದೇಶ ಪ್ರತಿಯನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.