ಮೈಸೂರು: ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧಿಸಲಾಗಿದೆ. ಅಲ್ಲದೇ ಚಾಮುಂಡೇಶ್ವರಿ ದರ್ಶನದ ವೇಳೆ ಮೊಬೈಲ್ ನಿಷೇಧ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಇಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡು ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಅಮ್ಮನ ದರ್ಶನ ಪಡೆದರು. ಬಳಿಕ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸಿದರು. ಈ ವೇಳೆ ಬೆಟ್ಟದ ಅಭಿವೃದ್ಧಿಯ ಬಗ್ಗೆ ಮಹತ್ವದ ಚರ್ಚೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು.
ಚಾಮುಂಡಿಬೆಟ್ಟವಷ್ಟೇ ಅಲ್ಲ ಎಲ್ಲ ದೇಗುಲಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಚಾಮುಂಡಿಬೆಟ್ಟದಲ್ಲಿ ಸುರಕ್ಷತೆ ಇರಬೇಕೆಂದು ಸಿಸಿಟಿವಿ ಅಳವಡಿಕೆ ಮಾಡಲಾಗುವುದು. ಚಾಮುಂಡಿಬೆಟ್ಟದಲ್ಲಿ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಚಾಮುಂಡಿ ಬೆಟ್ಟ ಅಭಿವೃದ್ಧಿ ದೃಷ್ಟಿಯಿಂದ ಪ್ರಾಧಿಕಾರ ಮಾಡಿದ್ದೇವೆ. ಹಾಗಿಯೇ ಭಕ್ತಾದಿಗಳಿಗೆ ಸೌಲಭ್ಯ ಒದಗಿಸಲು ಪ್ರಾಧಿಕಾರ ರಚನೆ ಮಾಡಲಾಗಿದ್ದು, ಅಪರಾಧ ತಡೆಗಟ್ಟಲು ಟಾಸ್ಕ್ಫೋರ್ಸ್ ರಚನೆ ಮಾಡುತ್ತೇವೆ ಎಂದರು.
ಇನ್ನು ದಸರಾ ಸಂದರ್ಭದಲ್ಲಿ ವಿವಿಧ ಭಾಗದಿಂದ ಜನರು ಬರುತ್ತಾರೆ. ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ಸೌಲಭ್ಯ ಒದಗಿಸಬೇಕಿದೆ. ಚಾಮುಂಡಿಬೆಟ್ಟದಲ್ಲಿ ಸ್ವಚ್ಛತೆ ಬಗ್ಗೆ ಗಮನಹರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.