ಬೆಂಗಳೂರು: ಶಕ್ತಿ ಯೋಜನೆ ಜಾರಿ ಮಾಡುವ ನಾವು ನಷ್ಟದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನ್ಲಾಕೂ ನಿಗಮಗಳಿಗೆ ಮರುಜೀವ ಕೊಟ್ಟಿದ್ದೇವೆ. ಸಾರಿಗೆ ಸಂಸ್ಥೆಗಳು ಈಗ ಲಾಭದತ್ತ ಮುಖ ಮಾಡಿದೆ ಎಂದು ಸದಾ ಸಾರಿಗೆ ಸಂಸ್ಥೆಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಸರ್ಕಾರ ಹಿಂಬಾಗಿಲಿನಿಂದ ನಿಗಮಗಳ ಖಾಸಗೀಕರಣಕ್ಕೆ ಮುಂದಾಗುತ್ತಿದೆ ಎಂಬ ಸತ್ಯ ಗುಟ್ಟಾಗಿ ಉಳಿದಿಲ್ಲ.
ಅದಕ್ಕೆ ತಾಜಾ ನಿದರ್ಶನ ಎಂಬಂತೆ ಈಗಾಗಲೇ ಹಂತ ಹಂತವಾಗಿ ಬಿಎಂಟಿಸಿ ವಾಹನಗಳಿಗೆ ಖಾಸಗಿ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಈ ಮೂಲಕ ಸಾರಿಗೆ ನಿಗಮಗಳನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಲು ಸರ್ಕಾರ ಹೊರಟಿದೆ ಎಂಬ ಆರೋಪ ಕೇಳಿ ಬಂದಿದೆ.
ಇದಕ್ಕೂ ಮೊದಲು ಇವಿ ಬಸ್‌ಗಳಿಗೆ ಖಾಸಗಿ ಚಾಲಕರ ನೇಮಕ ಮಾಡಿಕೊಂಡಿದ್ದ ಸಾರಿಗೆ ನಿಗಮಗ ಈಗ ಸಂಸ್ಥೆಯ ವಾಹನಗಳಿಗೂ ಖಾಸಗಿ ಚಾಲಕರ ನೇಮಕಕ್ಕೆ ಮುಂದಾಗಿದೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಬಿಎಂಟಿಸಿ 50 ಬೊಲೆರೊ ಜೀಪ್ ಗಳ ಚಾಲಕರ ನೇಮಕಕ್ಕೆ ಟೆಂಡರ್ ಕರೆದಿದೆ.
ಇನ್ನು ಚಾಲಕರನ್ನು ಒದಗಿಸಲು ಏಜೆನ್ಸಿಯ ಆಯ್ಕೆಗೆ ನಿಗಮ ಮುಂದಾಗಿದೆ. ಸೆಪ್ಟೆಂಬರ್ 30 ಒಳಗೆ KPPP ಮೂಲಕ ಬಿಡ್ ಸಲ್ಲಿಸಲು ಬಿಎಂಟಿಸಿ ನಿಗಮದ ಈಗಾಗಲೇ ಸೂಚನೆ ನೀಡಿದೆ. ಬಿಎಂಟಿಸಿಯ ಈ ನಡೆಗೆ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಪೂರ್ಣ ಬಿಎಂಟಿಸಿಯನ್ನು ಖಾಸಗಿಯವರಿಗೆ ಬಿಟ್ಟು ಕೊಡಲು ಸರ್ಕಾರ ಮುಂದಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಕೆಲ ಸಂಘಟನೆಗಳು ಲಿಖಿತವಾಗಿ ಖಾಸಗಿ ಕರಣ ಬೇಡ ಎಂದು ಹೇಳುತ್ತಿವೆ. ಆದರೆ ಕಾಸಗಿಕರಣದ ವಿರುದ್ಧ ಈವರೆಗೂ ಯಾವುದೆ ದೃಢ ನಿರ್ಧಾರ ತೆಗೆದುಕೊಂಡುಲ್ಲ. ಹೀಗಾಗಿ ಸಂಘಟನೆಗಳ ನಡೆ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ. ಇದೆಲ್ಲವನ್ನು ಗಮನಿಸಿದರೆ ಸಾರಿಗೆ ಸಂಘಟನೆಗಳ ಕೆಲ ಮುಖಂಡರು ಕೂಡ ಪರೋಕ್ಷವಾಗಿ ಕಾಸಗೀಕರಣವನ್ನು ಬೆಂಬಲಿಸುತ್ತಿದ್ದಾರೆಯೇ ಎಂಬ ಅನುಮಾನ ನೌಕರರಲ್ಲಿ ದಟ್ಟವಾಗುತ್ತಿದೆ.