ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಳೆದ 2020ರ ಜನವರಿಯಿಂದ 2023ರ ಫೆಬ್ರವರಿ 28ರ ನಡುವೆ ನಿವೃತ್ತರಾದ ನೌಕರರಿಗೆ ಈವರೆಗೂ ಶೇ.15ರ ಉಪಧನ ಮತ್ತು ನಿವೃತ್ತಿ ಗಳಿಕೆ ರಜೆ ಮೊತ್ತವನ್ನು ಈವರೆಗೂ ಕೊಟ್ಟಿಲ್ಲ ಎಂದು ನಿವೃತ್ತ ನೌಕರರು ಪ್ರತಿಭಟನೆ ನಡೆಸಿದ್ದಾರೆ.
ಸೇವಾ ನಿವೃತ್ತಿ ನೌಕರರ ಬಾಕಿ (ವೇತನ, ಗ್ರಾಚ್ಯುಟಿ, ನಿವೃತ್ತಿ ಗಳಿಕೆ ರಜೆ ನಗಧೀಕರಣ ಹಾಗೂ ಇನ್ನಿತರ ಸೌಲಭ್ಯಗಳು) ಹೋರಾಟ ಸಮಿತಿ ಈ ಸಂಬಂಧ ಹುಬ್ಬಳ್ಳಿಯಲ್ಲಿ ಅ.7ರಂದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಈ ಸಂಬಂಧ ಈಗಾಗಲೇ ಸಾರಿಗೆ ಮಂತ್ರಿಗಳು, ಮುಖ್ಯಮಂತ್ರಿಗಳು, ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೇರಿ ಎಲ್ಲ ಅಧಿಕಾರಿಗಳಿಗೂ ಮನವಿ ಕೊಟ್ಟಿದ್ದು ಅಲ್ಲದೆ ನಿತ್ಯ ಕಚೇರಿಯಿಂದ ಕಚೇರಿಗೆ ಅಲೆದು ಅಲೆದು ನಮ್ಮ ಚಪ್ಪಲಿಗಳು ಸವೆದವೇ ಹೊರತು ನಮಗೆ ಸಿಗಬೇಕಿರುವ ಸೌಲಭ್ಯಗಳು ಮಾತ್ರ ಇನ್ನು ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಈ ಸೇವಾ ವಿಮುಕ್ತಿ ನೌಕರರಿಗೆ 1-1-2020 ರಿಂದ 28-2-2023 ರವರೆಗಿನ ಅವಧಿಗೆ ಶೇಕಡಾ 15 ರ ಉಪಧನ ಮತ್ತು ನಿವೃತ್ತಿ ಗಳಿಕೆ ರಜೆ ಮೊತ್ತವನ್ನು ಕೂಡಲೇ ಪಾವತಿಸಬೇಕು. ಅದಕ್ಕಾಗಿ ನಾವು ಸಂಸ್ಥೆಯ ನಿವೃತ್ತ ಸಿಬ್ಬಂದಿಗಳು ತಮ್ಮಲ್ಲಿ ಮತ್ತೊಮೆ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಮನವಿ ಮಾಡಿದ್ದಾರೆ.
ಶೇಕಡಾ 15 ರ ಹೆಚ್ಚಿನ ವ್ಯತ್ಯಾಸದ ಉಪಧನ ಮತ್ತು ನಿವೃತ್ತಿ ಗಳಿಕೆ ರಜೆ ನಗಧೀಕರಣ ಮೊತ್ತವನ್ನು ದಿನಾಂಕ: 31-08- 2024. ‘ರೊಳಗಾಗಿ ವೇತನ ನಿಗದಿ ಪಟ್ಟಿಗಳನ್ನು ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳಲು ಎಂಡಿ ಅವರು ಆದೇಶಿಸಿದ್ದು ಸರಿಯಷ್ಟೇ.
ನಾವುಗಳು ಈಗಾಗಲೇ ಸೇವಾ ನಿವೃತ್ತಿಯಾಗಿದ್ದು, ಅತೀ ಕಡಿಮೆ ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ನಮ್ಮ ಮಕ್ಕಳ ವಿದ್ಯಾಭ್ಯಾಸ, ಜೀವನ ಮತ್ತು ಸದ್ಯ ಶ್ರೀ ದುರ್ಗಾಮಾತೆ ದಸರಾ/ದೀಪಾವಳಿ ಹಬ್ಬಗಳು ಬಂದಿವೆ ಹೀಗಾಗಿ ಹಣದ ಅವಶ್ಯಕತೆ ತುಂಬಾ ಇದೆ. ಈ ಹಣವನ್ನು ಈಗಾಗಲೇ ನಮ್ಮ ಹಿಂದಿನ ಮನವಿಯಲ್ಲಿ 15-9-2024 ರೊಳಗಾಗಿ ನೀಡಲು ಕೋರಿದ್ದೇವು. ಆದರೆ ಹಣ ನೀಡಿದೇ ಮತ್ತು ಲೆಕ್ಕವನ್ನು ಕೆಲವು ವಿಭಾಗಗಳಲ್ಲಿ ಮಾಡದೇ ಮೊತ್ತವನ್ನು ಕೇಳಲು ಹೋದರೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ.
ಹೀಗಾಗಿ ನಾವು ಬೇರೆ ದಾರಿ ಕಾಣದೆ ಪ್ರತಿಭಟನೆಗೆ ಇಳಿಯಬೇಕಾಯಿತು. ಇನ್ನು ಇದೇ ಅ.9ರಂದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಂಘಟನೆಗಳ ಮುಖಂಡರ ಸಭೆಯಲ್ಲಾದರೂ ನಮ್ಮ ಬಗ್ಗೆ ಒಂದು ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾ ನಿರತ ನಿವೃತ್ತ ನೌಕರರು ಒತ್ತಾಯಿಸಿದ್ದಾರೆ.