ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮತ್ತೆ ಸಾರಿಗೆ ನೌಕರರು ಮುಷ್ಕರಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒತ್ತಡ ಹಾಕುವ ಸಂಬಂಧ ಶುಕ್ರವಾರ ಆರು ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಗಾಂಧಿನಗರದ ಸಿಐಟಿಯು ಮುಖ್ಯ ಕಚೇರಿಯಲ್ಲಿ ಸಭೆ ನಡೆಸಿತು. ಈ ವೇಳೆ ಮಾತನಾಡಿದ ಅನಂತ್ ಸುಬ್ಬರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೇಳಿ ಕೊಳ್ಳುವುದಿಷ್ಟೆ, ಈಗಾಗಲೇ ಸಾರಿಗೆ ನೌಕರರು ಮುಷ್ಕರ ಮಾಡುವ ಮನಸ್ಥಿತಿಯಲ್ಲಿದ್ದಾರೆ. ಹೀಗಾಗಿ ಆ ಮಟ್ಟಕ್ಕೆ ತಂದುಕೊಳ್ಳಬೇಡಿ.
ಇನ್ನು ಈ ಹಿಂದೆ ನೀವು ಮುಖ್ಯಮಂತ್ರಿಯಾಗಿದ್ದಾಗ ನಾವು ಮೂರು ದಿನ ಮುಷ್ಕರ ಮಾಡಿದ್ದೆವು. ನಂತರ ಮೂರನೇ ದಿನ ನಮ್ಮ ಬೇಡಿಕೆ ಈಡೇರಿಸಲು ಮುಂದಾಗಿದ್ದಿರಿ. ಈ ಬಾರಿ ಆ ಪರಿಸ್ಥಿತಿ ತರಬೇಡಿ ಎಂದು ಎಚ್ಚರಿಕೆ ನೀಡಿದರು.
ಈ ನಡುವೆಯೂ ನಾವು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಎಂದು ನೌಕರರಿಗೆ ಹೇಳಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಮ್ಮ ಮುಷ್ಕರ ವಾಪಸ್ ಪಡೆಯಲ್ಲ. ಇದು ಬಹಳ ಸ್ಪಷ್ಟ, ನೌಕರರು ಮುಷ್ಕರಕ್ಕೆ ಸಿದ್ಧರಾಗಿದ್ದಾರೆ. ನಾವು ಈಗ ಮುಷ್ಕರದ ದಿನಾಂಕ ಘೋಷಣೆ ಮಾಡುವುದಷ್ಟೇ ಬಾಕಿ ಎಂದು ಸೂಕ್ಷ್ಮವಾಗಿ ತಿಳಿಸಿದರು.
ಇನ್ನು ನಾವು ಇಲ್ಲಿಯವರೆಗೆ ಕೊಟ್ಟಿರುವ ಮನವಿಗಳು ಸೇರಿದಂತೆ ಹಲವು ಬಾರಿ ಮೌಖಿಕವಾಗಿ ಬೇಡಿಕೆ ಇಟ್ಟಿರುವುದಕ್ಕೆ ನಮಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ದರಾಗಿದ್ದಾರೆ. ನಾವು ದಿನಾಂಕ ಘೋಷಣೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನೂ ಕರ್ನಾಟಕ ಸರ್ಕಾರ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ನೌಕರರಿಗೆ 38 ತಿಂಗಳ ಅರಿಯರ್ಸ್ ಹಣ ಬಿಡುಗಡೆ ಮಾಡಿಲ್ಲ. ಜತೆಗೆ 2024 ಜನವರಿಯಿಂದ ನೌಕರರಿಗೆ ವೇತನ ಹೆಚ್ಚಳ ಮಾಡಬೇಕಿತ್ತು, ಆದರೆ ನವೆಂಬರ್ ತಿಂಗಳು ಬಂದರೂ ಇನ್ನೂ ಈ ಬಗ್ಗೆ ತೀರ್ಮಾನ ಕೈಗೊಂಡಿಲ್ಲ.
ನಿವೃತ್ತಿ ಹೊಂದಿದ ನೌಕರರಿಗೆ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿಲ್ಲ. ಅರಿಯರ್ಸ್ ಹಣವೇ ಒಟ್ಟು 1750 ಕೋಟಿ ರೂಪಾಯಿ ನೀಡಬೇಕಿದೆ. ಗ್ರಾಚ್ಯುಟಿ ಹಣ ಸುಮಾರು 399.29 ಕೋಟಿ ರೂಪಾಯಿ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮತ್ತೊಮ್ಮೆ ಸಾರಿಗೆ ಮುಷ್ಕರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇದಕ್ಕೆ ಆಸ್ಪದ ಕೊಡದೆ ನೌಕರರ ಬೇಡಿಕೆಗಳನ್ನು ಶೀಗ್ರದಲ್ಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.