ನ್ಯೂಡೆಲ್ಲಿ: ಕೊರೊನಾ ಸೋಂಕಿತರಿರುವ ಪ್ರದೇಶಗಳ ಆಧಾರದ ಮೇಲೆ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಮಾರ್ಚ್ 24 ರಂದು ಮೊದಲು ವಿಧಿಸಲಾದ ಲಾಕ್‌ಡೌನ್ ಮೇ 3 ರಂದು ಕೊನೆಗೊಳ್ಳಬೇಕಿತ್ತು. ಆದರೆ ಇನ್ನೂ ಎರಡು ವಾರಗಳವರೆಗೆ ಅಂದರೆ ಮೇ 17ರವರೆಗೆ ವಿಸ್ತರಿಸಲಾಗಿದೆ.
ಕೋವಿಡ್-19 ಬಗ್ಗೆ ಖಾಸಗಿ ಮತ್ತು ಸಾರ್ವಜನಿಕ ಎರಡೂ ಉದ್ಯೋಗಿಗಳಿಗೆ ಆರೋಗ್ಯಾ ಸೇತು ಅಪ್ಲಿಕೇಶನ್‌ನ ಬಳಕೆಯನ್ನು ಕಡ್ಡಾಯಗೊಳಿಸಬೇಕು ಮತ್ತು “ಉದ್ಯೋಗಿಗಳಲ್ಲಿ ಈ ಅಪ್ಲಿಕೇಶನ್‌ನ 100% ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳುವುದು ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿಯಾಗಿರಬೇಕು ಎಂದು ಹೇಳಿದೆ.
ಕೆಂಪು ವಲಯಗಳಲ್ಲಿ ಖಾಸಗಿ ಕಾರುಗಳ ಚಾಲಕನನ್ನು ಹೊರತುಪಡಿಸಿ ಗರಿಷ್ಠ ಇಬ್ಬರನ್ನು ಕರೆದುಕೊಂಡು ಹೋಗಲು ಅನುಮತಿಸಿದೆ. ಆದರೆ ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಮಾತ್ರ ಪ್ರಯಾಣಿಸಬೇಕು. ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆಗಳು – ವಿಮಾನ, ರೈಲು, ಮೆಟ್ರೋ ಮತ್ತು ರಸ್ತೆ ಸಾರಿಗೆಗಳನ್ನು ತುರ್ತು ವೇಳೆ ಹೊರತುಪಡಿಸಿ ಉಳಿದಂತೆ ಸ್ಥಗಿತಗೊಳಿಸಲಾಗಿದೆ. ಈ ವೇಳೆ ಶೇ.50 ರಷ್ಟು ಸಾರಿಗೆ ಸಿಬ್ಬಂದಿ ಹಾಜರಾಗಬೇಕು. ಜತೆಗೆ ಶೇ.50ರಷ್ಟು ಡಿಪೋಗಳು ಕಾರ್ಯಾಚರಣೆಯಲ್ಲಿರಬೇಕು ಎಂದು ತಿಳಿಸಿದೆ.
ಮದ್ಯದಂಗಡಿ ತೆರೆಯಲು ಶರತ್ತುಬದ್ದ ಅವಕಾಶ
ಆರು ಅಡಿ ದೂರವನ್ನು ಕಾಯ್ದುಕೊಳ್ಳುವ ಮೂಲಕ ಮತ್ತು ಒಮ್ಮೆ ಐದಕ್ಕಿಂತ ಹೆಚ್ಚು ಜನ ಸೇರದಂತೆ ನೋಡಿಕೊಳ್ಳುವ ಮೂಲಕ ಕಿತ್ತಳೆ, ಹಸಿರು ವಲಯಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ, ಗುಟ್ಖಾ ಮತ್ತು ತಂಬಾಕು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.
ಶಾಲೆ, ಕಾಲೇಜುಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ಸಿನೆಮಾ ಹಾಲ್‌ಗಳು, ಮಾಲ್‌ಗಳು, ಜಿಮ್ನಾಷಿಯಂಗಳು ಮತ್ತು ಎಲ್ಲಾ ರೀತಿಯ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳನ್ನು ನಿಷೇಧಿಸಲಾಗಿದೆ.
ಸಂಜೆ 7 ಗಂಟೆಯ ಬೆಳಗ್ಗೆ 7 ಗಂಟೆವರೆಗೆ ನಡುವೆ ಸೆಕ್ಷನ್ 144 ರ ಅಡಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಿದ್ದು, ಅದು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದೆ.
ಅಗತ್ಯ ಮತ್ತು ಆರೋಗ್ಯ ಉದ್ದೇಶ ಹೊರತುಪಡಿಸಿ ಎಲ್ಲಾ ವಲಯಗಳಲ್ಲೂ, 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಇರಬೇಕು ಎಂದು ಕೇಂದ್ರ ಗೃಹ ಇಲಾಖೆ ಹೇಳಿದರು.
ಎಲ್ಲಾ ಖಾಸಗಿ ಕಚೇರಿಗಳು ಅಗತ್ಯಕ್ಕೆ ಅನುಗುಣವಾಗಿ 33% ಬಲದೊಂದಿಗೆ ಕಾರ್ಯನಿರ್ವಹಿಸಬೇಕು. ಉಳಿದ ವ್ಯಕ್ತಿಗಳು ಮನೆಯಿಂದ ಕೆಲಸ ಮಾಡಬೇಕು. ಮಾಸ್ಕ್ ಧರಿಸುವುದು ಮತ್ತು ಕೆಲಸದ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು ಕಡ್ಡಾಯವಾಗಿದೆ.
ಎಲ್ಲಾ ಸರ್ಕಾರಿ ಕಚೇರಿಗಳು ಉಪ ಕಾರ್ಯದರ್ಶಿ ಮತ್ತು ಅದಕ್ಕಿಂತ ಮೇಲ್ಮಟ್ಟದ ಹಿರಿಯ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಹಾಜರಿದ್ದು ಕಾರ್ಯನಿರ್ವಹಿಸಬೇಕು. ಉಳಿದ ಸಿಬ್ಬಂದಿ ಅಗತ್ಯಕ್ಕೆ ಅನುಗುಣವಾಗಿ 33% ವರೆಗೆ ಹಾಜರಿರಬೇಕು ಎಂದು ತಿಳಿಸಿದೆ.
ನಗರ ಪ್ರದೇಶಗಳಲ್ಲಿನ ಕೈಗಾರಿಕಾ ಸಂಸ್ಥೆಗಳಾದ ವಿಶೇಷ ಆರ್ಥಿಕ ವಲಯಗಳು (ಎಸ್‌ಇ ಜಡ್), ರಫ್ತು ಆಧಾರಿತ ಘಟಕಗಳು (ಇಒಯು), ಕೈಗಾರಿಕಾ ಎಸ್ಟೇಟ್ ಮತ್ತು ಪ್ರವೇಶ ನಿಯಂತ್ರಣ ಹೊಂದಿರುವ ಕೈಗಾರಿಕಾ ಟೌನ್‌ಶಿಪ್‌ಗಳಿಗೆ ಅನುಮತಿ ನೀಡಲಾಗಿದೆ.
ನಗರ ಪ್ರದೇಶಗಳಲ್ಲಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಕಾರ್ಮಿಕರು ಸ್ಥಳೀಯವಾಗಿ ಸಿಗಬೇಕು. ಹೊರಗಿನಿಂದ ಕರೆತರುವಂತಿಲ್ಲ ಎಂದು ತಳಿಸಿದೆ.
ನಗರ ಪ್ರದೇಶಗಳಲ್ಲಿನ ಅಂಗಡಿಗಳು, ಮಾಲ್‌ಗಳು, ಮಾರುಕಟ್ಟೆ ಮತ್ತು ಮಾರುಕಟ್ಟೆ ಸಂಕೀರ್ಣಗಳಿಗೆ ಅನುಮತಿ ನೀಡಿಲ್ಲ. ಆದರೆ ಚಿಲ್ಲರೇ ಅಂಗಡಿಗಳು ಮತ್ತು ವಸತಿ ಸಂಕೀರ್ಣಗಳಲ್ಲಿನ ಅಂಗಡಿಗಳು ನಗರ ಪ್ರದೇಶಗಳಲ್ಲಿ ಅಗತ್ಯ ಮತ್ತು ಅನಿವಾರ್ಯತೆ ಆಧಾರದ ಮೇಲೆ ತೆರೆಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.
ಸಭೆ ಸಮಾರಂಭಗಳು ಮಾಡಲೇಕು ಬೇಕು ಎಂಬ ಅನಿವಾರ್ಯತೆ ಇರುವ ಕಡೆ ಗರಿಷ್ಠ 50 ಜನ ಮೀರಬಾರದು ಮತ್ತು ಅಂತ್ಯಕ್ರಿಯೆಯಲ್ಲಿ 20 ಜನ ಸೇರಲು ಅವಕಾಶ ನೀಡಲಾಗಿದೆ ಎಂದು ಹೇಳಿದರು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಶಿಕ್ಷಾರ್ಹ ಅಪರಾಧ ಮತ್ತು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಗೃಹ ಇಲಾಖೆ ವಿವರಿಸಿದೆ.