ಬೆಂಗಳೂರು: ಇದೇ ಜೂನ್ 29ಕ್ಕೆ ಘೋಷಣೆಯಾಗಿರುವ ವಿಧಾನ ಪರಿಷತ್ನ 7 ಸ್ಥಾನಗಳಿಗೂ ಅವಿರೋಧ ಆಯ್ಕೆ ಖಚಿತವಾಗಿದೆ.
ಜೂನ್ 29 ರಂದು ಚುನಾವಣೆ ನಡೆಯಬೇಕಾಗಿತ್ತು. ಆದರೆ 7 ಸ್ಥಾನಗಳಿಗೆ 7 ಅಭ್ಯರ್ಥಿಗಳು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದು, ಆ ಅಭ್ಯರ್ಥಿಗಳ ಆಯ್ಕೆಗೆ ಪ್ರತಿಸ್ಪರ್ಧಿ ಇಲ್ಲದಿರುವುದರಿಂದ ಅವಿರೋಧವಾಗಿ ಅವರು ಆಯ್ಕೆಯಾಗಲಿದ್ದಾರೆ.
ಬಿಜೆಪಿಯಿಂದ ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಆರ್. ಶಂಕರ್, ಮಾಜಿ ಶಾಸಕ ಸುನೀಲ್ ವಲ್ಯಾಪುರೆ ಹಾಗೂ ಪಕ್ಷದ ಮುಖಂಡ ಪ್ರತಾಪ್ ಸಿಂಹ ನಾಯಕ್ ನಾಮಪತ್ರ ಸಲ್ಲಿಸಿದ್ದರೆ, ಕಾಂಗ್ರೆಸ್ ಪಕ್ಷದಿಂದ ಬಿ.ಕೆ. ಹರಿಪ್ರಸಾದ್ ಹಾಗೂ ನಸೀರ್ ಅಹಮ್ಮದ್ ನಾಮಪತ್ರ ಸಲ್ಲಿಸಿದ್ದು ಜೆಡಿಎಸ್ನಿಂದ ಇಂಚರ ಗೋವಿಂದರಾಜು ನಾಮಪತ್ರ ಸಲ್ಲಿಸಿದ್ದಾರೆ.
ಇಂದು (ಜೂ.18) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಹೀಗಾಗಿ ಬಿಜೆಪಿಯಿಂದ 4, ಕಾಂಗ್ರೆಸ್ ಪಕ್ಷದಿಂದ 2 ಹಾಗೂ ಜೆಡಿಎಸ್ನಿಂದ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದು ಇವರನ್ನು ಹೊರತು ಪಡಿಸಿ ಮತ್ತ್ಯಾರು ಉಮೇದುವಾರಿಕೆ ಸಲ್ಲಿಸದ ಹಿನ್ನೆಲೆಯಲ್ಲಿ ಇವರ ಅವಿರೋಧ ಆಯ್ಕೆಯ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.
ವಿಧಾನಸಭೆಯಲ್ಲಿ ಬಿಜೆಪಿ 116, ಕಾಂಗ್ರೆಸ್ 68 ಹಾಗೂ ಜೆಡಿಎಸ್ 34 ಸದಸ್ಯರ ಬಲ ಹೊಂದಿದೆ. ಸದ್ಯ ವಿಧಾನಸಭೆಯ ಬಲಾಬಲದಂತೆ ಒಬ್ಬ ಪರಿಷತ್ ಅಭ್ಯರ್ಥಿಯನ್ನು ಆಯ್ಕೆ ಮಾಡಲು 33 ಶಾಸಕರ ಬೆಂಬಲ ಬೇಕು. ಇದರಿಂದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ರಮವಾಗಿ ತಲಾ 4, 2 ಹಾಗೂ 1 ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು. ಅದರಂತೆ ಇಂದು ನಾಮಪತ್ರ ಸಲ್ಲಿಸಿದ್ದು ಚುನಾವಣೆ ನಡೆಯದೇ ಈ ಏಳು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಇನ್ನು ರಾಜರಾಜೇಶ್ವರಿನಗರ ಹಾಗೂ ಮಸ್ಕಿ ವಿಧಾನಸಭೆ ಕ್ಷೇತ್ರಗಳ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಆ ಎರಡೂ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆಯಷ್ಟೆ.