ತಿ. ನರಸೀಪುರ: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬಸವನಹಳ್ಳಿ, ಕುರುಬೂರು ಮತ್ತು ಬನ್ನೂರು ಪಟ್ಟಣದ ನಿವಾಸಿಗಳಲ್ಲಿ ತಲಾ ಒಂದೊಂದು ಕೊರೊನಾ ಪ್ರಕರಣಗಳು ಇಂದು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.
ತಾಲೂಕಿನಲ್ಲಿ ಇಂದು ಮೂರು ಪ್ರಕರಣಗಳು ಪತ್ತೆಯಾಗಿದ್ದು, ಹಿಂದಿನ ಎರಡು ಪ್ರಕರಣಗಳು ಸೇರಿ ಒಟ್ಟು ಐದು ಮಂದಿ ಕೊರೊನಾ ಸೋಂಕಿತರು ಇದ್ದಾರೆ.
ಬೆಂಗಳೂರಿನಿಂದ ಕುರುಬೂರು ಗ್ರಾಮಕ್ಕೆ ಬಂದಿದ್ದ ವ್ಯಕ್ತಿಗೆ ಕೋವಿಡ್ ವೈರಸ್ ತಗುಳಿರುವುದು ದೃಢಪಟ್ಟಿದೆ. ಅದರಂತೆ ಬಸವನಹಳ್ಳಿಗೆ ಬಂದಿದ್ದ ಹಾಲಿ ಮೈಸೂರಿನಲ್ಲಿ ವಾಸವಿರುವ ಪೊಲೀಸ್ ಪೇದೆಗೂ ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ.
ಇನ್ನು ಬನ್ನೂರಿನ ಬಿಸ್ಮಿಲ್ಲಾ ಬಡಾವಣೆಯ ನಿವಾಸಿಯೊಬ್ಬರಿಗೂ ಸೋಂಕು ಇರುವುದಾಗಿ ತಿಳಿದು ಬಂದಿದ್ದು, ಇವರ ಟ್ರಾವೆಲ್ ಹಿಸ್ಟರಿಯನ್ನು ತಾಲೂಕು ಆಡಳಿತ ಕಲೆ ಹಾಕುತ್ತಿದೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪ್ರಮಾಣ ಏರಿಕೆ ಆಗುತ್ತಿರುವುದರಿಂದ ಜನತೆ ಭಯಭೀತರಾಗುತ್ತಿದ್ದಾರೆ.
ಕೊರೊನಾದಿಂದ ಗ್ರಾಮೀಣ ಪ್ರದೇಶದ ಜನತೆಯಲ್ಲಿ ಆತಂಕ ಹೆಚ್ಚುತ್ತಿದೆ. ಆದ್ದರಿಂದ ಮನೆಯಿಂದ ಹೊರ ಬರುವ ಪ್ರತಿಯೊಬ್ಬರೂ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಹಾಗೂ ಮುಖಕ್ಕೆ ಮಾಸ್ಕ್ ಅನ್ನು ಕಡ್ಡಾಯವಾಗಿ ಹಾಕಿಕೊಂಡು ಸ್ವಚ್ಛತೆ ಕಾಪಾಡಿ ಕೊಳ್ಳಬೇಕು. ಜತೆಗೆ 3-4 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.