ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಸರ್ಕಾರದ ಸಾಧನೆಯನ್ನು ಪ್ರಶಂಸಿಸಲು ಸಂಸದರ ಕೈಯಿಂದ ಚಪ್ಪಾಳೆ ಹೊಡೆಸಿದ್ದರು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಪಾದರ್ಪಣೆ ಮಾಡಿದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ನಡೆದ ʼಸಾರ್ಥಕ ವರ್ಷ, ಸಮರ್ಥ ನಾಯಕʼ ಕಾರ್ಯಕ್ರಮದಲ್ಲಿ ಮಾತನಾಡಿದರು.
28 ಲೋಕಸಭಾ ಕೇತ್ರದಲ್ಲಿ 25 ಕ್ಷೇತ್ರಗಳನ್ನು ನಾವು ಗೆಲ್ಲುವ ಮೂಲಕ ಪ್ರಧಾನಿ ಮೋದಿಯವರಿಗೆ ಕಾಣಿಕೆ ನೀಡಿದ್ದೇವೆ. ಕರ್ನಾಟಕದ ಜನ ನಮ್ಮನ್ನು ಆಶೀರ್ವಾದ ಮಾಡಿದ್ದಾರೆ. 25 ಕ್ಷೇತ್ರಗಳನ್ನು ಗೆದ್ದಿರುವುದು ದಾಖಲೆ. ಕಾರ್ಯಕರ್ತರು, ಶಾಸಕರು ಹಗಲಿರುಳು ದುಡಿದ ಪರಿಣಾಮದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.
ಉಪ ಚುನಾವಣೆಯ 15 ಕ್ಷೇತ್ರಗಳ ಪೈಕಿ ನಾವು 12ರಲ್ಲಿ ಗೆದ್ದುಕೊಂಡಿದ್ದೇವೆ. ದೆಹಲಿಯಲ್ಲಿ ಪ್ರಧಾನಿ ಮೋದಿ ವಾರಕ್ಕೊಮ್ಮೆ ಸಂಸದರ ಸಭೆ ಕರೆಯುತ್ತಾರೆ. ಈ ಸಭೆಯಲ್ಲಿ ಎಲ್ಲ ಸಂಸದರನ್ನು ಎದ್ದು ನಿಲ್ಲಿಸಿ ಚಪ್ಪಾಳೆ ಹೊಡೆಸಿದ್ದಾರೆ. ಇದು ನಮಗೆ ಸಿಕ್ಕಿದ ದೊಡ್ಡ ಗೌರವವಾಗಿದ್ದು ಹೆಮ್ಮೆಯ ಸಂಗತಿ ಎಂದರು.
ರಾಜ್ಯದ ಜನರ ಆಶೀರ್ವಾದ ನಮಗೆ ಸಿಕ್ಕಿದ್ದರೂ ನಾವು ಮಾಡಬೇಕಾದ ಕೆಲಸ ಬಹಳಷ್ಟಿದೆ. ನನಗೆ ಕಣ್ಣೀರು ಬರುತ್ತಿದ್ದು ಕೋವಿಡ್ ಕಾಡದೇ ಇದ್ದರೆ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದಾಗಿತ್ತು ಎಂದು ಹೇಳಿದರು.
ಅಧಿಕಾರಕ್ಕೆ ಬಂದಾಗ ಪ್ರವಾಹ ಬಂತು. ಆದರೆ ಈ ವರ್ಷ ಭಗವಂತನ ದಯದಿಂದ ಉತ್ತಮ ಮಳೆ ಆಗಿದ್ದು ಜಲಾಶಯಗಳು ಭರ್ತಿಯಾಗುತ್ತಿವೆ. ಬಾಕಿ ಇರುವ ಮೂರು ವರ್ಷದ ಅವಧಿಯಲ್ಲಿ ಕರ್ನಾಟಕವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಸಿಎಂ ಭರವಸೆಯ ಮಾತನ್ನಾಡಿದ್ದಾರೆ.
ಮುಂದಿನ ದಿನಗಳಲ್ಲಿ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ನಾವು ಸಾಗಬೇಕು. ಜತೆಗೆ ಕೊರೊನಾ ಸೋಂಕಿನ ಜತೆಯೇ ಜೀವನವನ್ನು ದೂಡುವ ಕಲೆಯನ್ನು ಕಲಿತುಕೊಳ್ಳುವುದು ಇಂದಿನ ದಿನದಲ್ಲಿ ಅನಿವಾರ್ಯವಾಗಿದೆ ಎಂದು ನಾಡಿನ ಜನರಿಗೆ ಕಿವಿ ಮಾತನ್ನು ಹೇಳಿದರು.
ನಾವು ಏನೆ ಪ್ರಯತ್ನ ಮಾಡಿದರೂ ಅದು ನಿಮ್ಮ ಒಳ್ಳೆಯದಕ್ಕೆ ಹೀಗಾಗಿ ಜನರು ನಮ್ಮ ಸರ್ಕಾರದೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಆರ್ಥಿಕ ಸ್ಥಿರತೆ ಕಾಪಾಡಲು ಶ್ರಮಿಸಿದೆ
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷದಲ್ಲಿ ಹಲವಾರು ಐತಿಹಾಸಿಕ ಸವಾಲುಗಳ ನಡುವೆಯೂ ಆರ್ಥಿಕ ಸ್ಥಿರತೆ ಕಾಪಾಡಲು ಶ್ರಮಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬರದ ಛಾಯೆಯಲ್ಲಿದ್ದ ರಾಜ್ಯದಲ್ಲಿ ಕೆಲವೇ ದಿನಗಳೊಳಗೆ ಹಿಂದೆಂದೂ ಕಂಡರಿಯದ ಪ್ರವಾಹ, ಪರಿಹಾರ ವಿತರಣೆ, ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿ ಅವರು ಖುದ್ದು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.