ಬೆಂಗಳೂರು: ಅತಿ ವೇಗವಾಗಿ ಬಂದ ಕಾರೊಂದು ರಸ್ತೆ ದಾಟುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಸ್ಥಳದಲ್ಲೇ ಬಾಲಕ ಮೃತಪಟ್ಟಿರುವ ಘಟನೆ ಬಾಗಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.
ಈ ಭೀಕರ ಹಿಟ್ ಆಂಡ್ ರನ್ ಪ್ರಕರಣ ಸೆ.17 ರಂದು ರಾತ್ರಿ 11:30ರಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಬಾಲಕ ಸೇರಿ ಇನ್ನಿಬ್ಬರು ರಸ್ತೆ ದಾಟುತ್ತಿದ್ದರು. ಈ ವೇಳೆ ಬಾಲಕ ಮೊಬೈಲ್ ನೋಡಿಕೊಂಡು ಮುಂದೆ ಹೋಗುತ್ತಿದ್ದು ಉಳಿದ ಇಬ್ಬರು ಆತನ ಹಿಂದೆ ಹೋಗುತ್ತಿದ್ದರು. ಆಗ ಕೆಂಪು ಬಣ್ಣದ ಕಾರು ವೇಗವಾಗಿ ಬರುತ್ತಿರುವುದು ನೋಡಿದ ಇಬ್ಬರು ಕೂಗಿ ಹೇಳುವಷ್ಟರಲ್ಲೇ ಕಾರು ಅತೀವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಾಲಕ 5 ಅಡಿಗೂ ಹೆಚ್ಚು ಎತ್ತರಕ್ಕೆ ಹಾರಿ ನೆಲಕ್ಕೆ ಅಪ್ಪಳಿಸಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಮಾನವೀಯತೆ ದೃಷ್ಟಿಯಿಂದ ಕಾರು ನಿಲ್ಲಿಸಬೇಕಿದ್ದ ಡ್ರೈವರ್ ಹಾಗೇ ಹೊರಟು ಹೋಗಿದ್ದಾನೆ. ಸದ್ಯ ಈ ಹಿಟ್ ಅಂಡ್ ರನ್ ದೃಶ್ಯವು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.