ಹಾಸನ: ಕೆಟ್ಟು ನಿಂತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ರಿಪೇರಿ ಮಾಡುವ ವೇಳೆ ಕಾರೊಂದು ಡಿಕ್ಕಿ ಹೊಡದೆ ಪರಿಣಾಮ ಚಿಕ್ಕಮಗಳೂರು ಘಟಕದ ಚಾಲಕ ಕಂ ನಿರ್ವಾಹಕರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ಸಮೀಪ ಸಂಭವಿಸಿದೆ.
KSRTC ಚಿಕ್ಕಮಗಳೂರು ಘಟಕದ ಚಾಲಕ ಕಂ ನಿರ್ವಾಹಕ ಶ್ರೀನಾಥ್ ಅಪಘಾತದಲ್ಲಿ ಮೃತಪಟ್ಟವರು. ಬುಧವಾರ ಸುಮಾರು 10.30ರಲ್ಲಿ ಚಿಕ್ಕಮಗಳೂರು – ಮೈಸೂರು ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಸ್ ಹೊಳೆನರಸೀಪುರ ಸಮೀಪ ಕೆಟ್ಟು ನಿಂತಿದೆ.
ಈ ವೇಳೆ ವಾಹನ ದುರಸ್ತಿಗೆ ಹೊಳೆ ನರಸೀಪುರ ಘಟಕದಿಂದ ತಾಂತ್ರಿಕ ಸಿಬ್ಬಂದಿಗಳು ಬಂದಿದ್ದು, ವಾಹನ ದುರಸ್ತಿ ಮಾಡುವಾಗ ರಸ್ತೆಯಲ್ಲಿ ನಿಂತಿದ್ದ ನಿರ್ವಾಹಕ ಶ್ರೀನಾಥ್ ಅವರಿಗೆ ಅಪರಿಚಿತ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ನಿರ್ವಾಹಕರು ತೀವ್ರ ಗಾಯಗೊಂಡಿದ್ದರು.
ಗಾಯಾಳು ನಿರ್ವಾಹಕ ಶ್ರೀನಾಥ್ ಅವರನ್ನು ಕೂಡಲೇ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಅಸುನೀಗಿದ್ದಾರೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವರು, ಅಧಿಕಾರಿಗಳ ಸಂತಾಪ: ನಮ್ಮನ್ನು ಕ್ಷಮಿಸಿ ಬಿಡಿ ಚಿಕ್ಕಮಗಳೂರು ಘಟಕದ ಚಾಲಕ ಕಂ ನಿರ್ವಾಹಕರಾದ ಶ್ರೀನಾಥ್ ಅವರೆ, ಕೂಟದ ಕಟ್ಟಾಳು ಆದ ನಿಮಗೆ ಇಷ್ಟು ಬೇಗ ಇಂಥ ಸಾವು ಬರುತ್ತದೆ, ನೀವು ನಮ್ಮನ್ನೆಲ್ಲ ಬಿಟ್ಟು ಹೋಗುತ್ತೀರಾ ಅಂತ ಅಂದುಕೊಂಡಿರಲಿಲ್ಲ. ಡ್ಯೂಟಿಯಲ್ಲಿ ಇದ್ದಾಗಲೇ ಜವರಾಯ ಅಟ್ಟಹಾಸ ಮೆರೆದಿರುವುದು ತುಂಬಾ ದುಃಖಕರ ಸಂಗತಿ.
ಈ ನಿಮ್ಮ ಸಾವು ನಮಗೆ ಹಾಗೂ ನಮ್ಮ ಸಂಘಟನೆ, ಜತೆಗೆ ನಿಮ್ಮ ಕುಟುಂಬಕ್ಕೂ ತುಂಬಲಾರದ ನಷ್ಟ ತಂದಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಅಗಲಿಕೆಯ ನೋವು ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನಿಮ್ಮ ಕುಟುಂಬಕ್ಕೆ ಆ ದೇವರು ಕೊಡಲಿ ಎಂದು ಕೂಟದ ಪದಾಧಿಕಾರಿಗಳು ಪ್ರಾರ್ಥಿಸಿದ್ದಾರೆ.
ಇನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಂಡಿ ಅನ್ಬುಕುಮಾರ್ ಹಾಗೂ ಸಾರಿಗೆ ಅಧಿಕಾರಿಗಳು ಸಂತಾಪ ಸೂಚಿಸಿದ್ದು, ಶ್ರೀನಾಥ್ ಅವರು ಇಹಲೋಕ ತ್ಯಜಿಸಿದ ವಿಷಯ ತಿಳಿದು ಭಾರಿ ನೋವಾಯಿತು ನಮ್ಮ ಸಂಸ್ಥೆಯ ನೌಕರರೊಬ್ಬರು ಈ ರೀತಿ ಅಗಲಿರುವುದು ಭಾರಿ ನೋವು ತಂದಿದೆ. ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.