ನ್ಯೂಡೆಲ್ಲಿ: 2025-26 ನೇ ಸಾಲಿನ ಕೇಂದ್ರ ಬಜೆಟ್‌ಅನ್ನು ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.16 ಗಂಟೆವರೆಗೆ ಮಂಡಿಸಿದ್ದು, ಈ ವೇಳೆ ಆದಾಯದ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷದಿಂದ 12 ಲಕ್ಷ ರೂ.ವರೆಗೆ ಹೆಚ್ಚಳ ಮಾಡಿ ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿಕೊಟ್ಟಿದ್ದಾರೆ ಸಚಿವೆ ನಿರ್ಮಲಾ ಸೀತಾರಾಮನ್.
12 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ಇಲ್ಲ. 4 ಲಕ್ಷದಿಂದ 8 ಲಕ್ಷದವರೆಗೆ ಶೇ.5ರಷ್ಟು. 8 ಲಕ್ಷದಿಂದ 11 ಲಕ್ಷದವರೆಗೆ ಶೇ.10ರಷ್ಟು. 12 ಲಕ್ಷದಿಂದ 15 ಲಕ್ಷದವರೆಗೆ ಶೇ.15ರಷ್ಟು ಹಾಗೂ 15 ಲಕ್ಷದಿಂದ 20 ಲಕ್ಷ ರೂ.ವರೆಗೆ ಶೇ.20ರಷ್ಟು ತೆರಿಗೆ ಕಟ್ಟಬೇಕು. ಇನ್ನು 20 ಲಕ್ಷದಿಂದ 24 ಲಕ್ಷ ರೂ.ರೆಗೆ ಶೇ.25ರಷ್ಟು ತೆರಿಗೆಯನ್ನು ಅಲ್ಲದೆ 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸುವ ಬಗ್ಗೆ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ವಿಮಾ ವಲಯದ ಮಿತಿ ಹೆಚ್ಚಳ: ವಿಮಾ ವಲಯದಲ್ಲಿ ಎಎಫ್‌ಡಿಐ ಮಿತಿಯನ್ನು 74 ಪ್ರತಿಶತದಿಂದ 100 ಪ್ರತಿಶತಕ್ಕೆ ಹೆಚ್ಚಿಸಲಾಗುವುದು. ಬಾಡಿಗೆಯ ಮೇಲಿನ ಟಿಡಿಎಸ್‌ನ ವಾರ್ಷಿಕ ಮಿತಿಯನ್ನು 2.40 ಲಕ್ಷ ರೂ.ನಿಂದ 6 ಲಕ್ಷ ರೂ.ಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಹಿರಿಯ ನಾಗರಿಕರಿಗೆ TDS ಮಿತಿಯಲ್ಲಿ ಹೆಚ್ಚಳ: ಹೊಸ ಆದಾಯ ತೆರಿಗೆ ಮಸೂದೆಯು ಮಧ್ಯಮ ವರ್ಗದ ಮೇಲೆ ಕೇಂದ್ರೀಕೃತವಾಗಿರುತ್ತದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿಯನ್ನು 50,000 ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಲಾಗುತ್ತಿದೆ ಎಂದು ಘೋಷಿಸಿದರು.
ಅಗ್ಗವಾಗಲಿವೆ ಈ ವಸ್ತುಗಳು: ಟಿವಿ, ಮೊಬೈಲ್, ಎಲೆಕ್ಟ್ರಿಕ್ ಕಾರುಗಳು ಮತ್ತು ಭಾರತದಲ್ಲಿ ತಯಾರಿಸಿದ ಬಟ್ಟೆಗಳು, ಚರ್ಮದ ವಸ್ತುಗಳೂ ಅಗ್ಗವಾಗಲಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಾಜ್ಯಗಳಿಗೆ 50 ವರ್ಷ ಬಡ್ಡಿ ರಹಿತ ಸಾಲ: ದೇಶದ ಎಲ್ಲ ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ.
37 ಜೀವರಕ್ಷಕ ಔಷಧಗಳಿಗೆ ಕಸ್ಟಮ್ ಸುಂಕದಿಂದ ವಿನಾಯಿತಿ: 37 ಜೀವ ರಕ್ಷಕ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಸಹಾಯ: ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಸಹಾಯ ಮಾಡಲು ಸರ್ಕಾರವು ಗುರುತಿನ ಚೀಟಿಗಳು ಮತ್ತು ಇ-ಶ್ರಮ್ ವೇದಿಕೆಯಲ್ಲಿ ನೋಂದಣಿಗೆ ವ್ಯವಸ್ಥೆ ಮಾಡುತ್ತದೆ. ಒಟ್ಟು 20,000 ಕೋಟಿ ರೂ.ನಲ್ಲಿ ಪರಮಾಣು ಶಕ್ತಿ ಮಿಷನ್ ರಚಿಸಲಾಗುವುದು. 2047 ರ ವೇಳೆಗೆ 100 GW ಪರಮಾಣು ಶಕ್ತಿ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು ಹೊಂದಿದೆ.
ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಸುಧಾರಣೆಗಳನ್ನು ಉತ್ತೇಜಿಸಲಾಗುವುದು, ಸುಧಾರಣೆಗಳನ್ನು ಮುಂದುವರಿಸಲು ರಾಜ್ಯಗಳಿಗೆ GSDP ಯ 0.5 ಪ್ರತಿಶತದಷ್ಟು ಸಾಲವನ್ನು ಅನುಮತಿಸಲಾಗುವುದು. ಐದು ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಪ್ರಥಮ ಬಾರಿಗೆ 2 ಕೋಟಿ ರೂಪಾಯಿ ಸಾಲವನ್ನು ಸರ್ಕಾರ ನೀಡಲಿದೆ. ಸರ್ಕಾರವು 120 ಗಮ್ಯಸ್ಥಾನಗಳನ್ನು ಸಂಪರ್ಕಿಸಲು ಪರಿಷ್ಕೃತ UDAN ಯೋಜನೆಯನ್ನು ಪ್ರಾರಂಭಿಸುತ್ತದೆ, ಇದು ಮುಂದಿನ 4 ಕೋಟಿ ಹೆಚ್ಚುವರಿ ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ.
ಬಿಹಾರದಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ: ಬಿಹಾರದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ. ಪಶ್ಚಿಮ ಕೋಸಿ ಕಾಲುವೆಗೆ ಆರ್ಥಿಕ ನೆರವು ನೀಡಲಾಗುವುದು ಎಂದರು.
ದೇಶದ ಬೆಳವಣಿಗೆಗಾಗಿ ರಫ್ತಿಗೆ ಹೆಚ್ಚು ಒತ್ತು: ದೇಶದ ಬೆಳವಣಿಗೆಗಾಗಿ ರಫ್ತನ್ನು ಉತ್ತೇಜಿಸಲು ರಫ್ತು ಉತ್ತೇಜನ ಮಿಷನ್ ಸ್ಥಾಪಿಸಲಾಗುವುದು.
ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ: ದೇಶದಲ್ಲಿರುವ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಇದರಿಂದ ಕ್ಯಾನ್ಸರ್ ರೋಗಿಗಳು ಬೇರೆ ಬೇರೆ ಊರಿಗೆ ಅಲೆಯುವ ಅಗತ್ಯವಿರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವೈದ್ಯಕೀಯ ಕಾಲೇಜಿನಲ್ಲಿ 10 ಸಾವಿರ ಸೀಟುಗಳು ಹೆಚ್ಚಳ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜಿನಲ್ಲಿ 10 ಸಾವಿರ ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.
ಬಿಹಾರಕ್ಕೆ ಮಖಾನಾ ಮಂಡಳಿ: ಬಿಹಾರದಲ್ಲಿ ಮಖಾನಾ ಮಂಡಳಿಯನ್ನು ರಚಿಸಲಾಗುವುದು, ಅಲ್ಲದೆ 50 ಸಾವಿರ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರು ಹರಿಸುವ ಯೋಜನೆಗೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಎಸ್ಸಿಎಸ್ಟಿ ಮಹಿಳೆಯರಿಗೆ ಸಾಲದ ಯೋಜನೆ: ಎಸ್ಸಿ/ಎಸ್ಟಿ ಸಮುದಾಯಗಳ 5 ಲಕ್ಷ ಮಹಿಳೆಯರಿಗೆ ಲಾಭದಾಯಕವಾಗುವಂತೆ ಐದು ವರ್ಷಗಳ ಅವಧಿಯೊಂದಿಗೆ ಟರ್ಮ್ ಲೋನ್ಗಳನ್ನು ನೀಡಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಆಟಿಕೆಗಳ ತಯಾರಿಕೆಗೆ ಒತ್ತು: ಮೇಕ್ ಇನ್ ಇಂಡಿಯಾ ಬ್ರ್ಯಾಂಡ್ನೊಂದಿಗೆ ಆಟಿಕೆಗಳ ವಲಯಕ್ಕಾಗಿ, ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಸರ್ಕಾರವು ಯೋಜನೆಯನ್ನು ಜಾರಿಗೊಳಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಸ್ಸಾಂನಲ್ಲಿ ಯೂರಿಯಾ ಸ್ಥಾವರ ಸ್ಥಾಪನೆ: ಯೂರಿಯಾ ಪೂರೈಕೆಯನ್ನು ಇನ್ನಷ್ಟು ಹೆಚ್ಚಿಸಲು ಅಸ್ಸಾಂನಲ್ಲಿ ಯೂರಿಯಾ ಪ್ಲಾಂಟ್ ಸ್ಥಾಪಿಸಲಾಗುವುದು, ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸ್ಥಾವರವನ್ನು ಅಸ್ಸಾಂನ ನಾಮ್ರೂಪ್ನಲ್ಲಿ ಸ್ಥಾಪಿಸಲಾಗುವುದು, ಪೂರ್ವ ಪ್ರದೇಶದಲ್ಲಿ ನಿಷ್ಕ್ರಿಯವಾಗಿದ್ದ 3 ಯೂರಿಯಾ ಸ್ಥಾವರಗಳನ್ನು ಪುನಃ ತೆರೆಯಲಾಗಿದೆ.
ಹೂಡಿಕೆ ಮತ್ತು ವಹಿವಾಟು ಮಿತಿಗಳ ಹೆಚ್ಚಳ: ಎಲ್ಲ ಎಂಎಸ್ಎಂಇಗಳ ವರ್ಗೀಕರಣಕ್ಕಾಗಿ ಹೂಡಿಕೆ ಮತ್ತು ವಹಿವಾಟು ಮಿತಿಗಳನ್ನು ಕ್ರಮವಾಗಿ 2.5 ಮತ್ತು 2 ಪಟ್ಟು ಹೆಚ್ಚಿಸಲಾಗುವುದು. ಇದು ನಮ್ಮ ಯುವಕರಿಗೆ ಬೆಳೆಯುವ ಮತ್ತು ಉದ್ಯೋಗವನ್ನು ಸೃಷ್ಟಿಸುವ ವಿಶ್ವಾಸವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಎಲ್ಲ ಸರ್ಕಾರಿ ಶಾಲೆಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ: ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲ ಸರ್ಕಾರಿ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ವಿಸ್ತರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪಾದರಕ್ಷೆ ಹಾಗೂ ಚರ್ಮದ ಉದ್ಯಮಕ್ಕೆ ಯೋಜನೆ: ಹಣಕಾಸು ಸಚಿವರು ಭಾರತದ ಪಾದರಕ್ಷೆ ಮತ್ತು ಚರ್ಮದ ವಲಯಕ್ಕೆ ಮೀಸಲಾದ ಯೋಜನೆಯನ್ನು ಘೋಷಿಸಿದರು. ಇದು 22 ಲಕ್ಷ ವ್ಯಕ್ತಿಗಳಿಗೆ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ, 4 ಲಕ್ಷ ಕೋಟಿ ರೂ. ಆದಾಯವನ್ನು ಸಾಧಿಸುತ್ತದೆ ಮತ್ತು ರಫ್ತುಗಳನ್ನು 1.1 ಲಕ್ಷ ಕೋಟಿಗೆ ರೂ.ಗೆ ಹೆಚ್ಚಿಸುತ್ತದೆ ಎಂದು ಹೇಳಿದರು.
ಐಐಟಿಗಳಿಗೆ ಹೆಚ್ಚುವರಿ ಮೂಲಸೌಕರ್ಯ: 2014 ರ ನಂತರ ಸ್ಥಾಪಿಸಲಾದ ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಐಐಟಿ ಪಾಟ್ನಾವನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.
ಇಂಡಿಯಾ ಪೋಸ್ಟ್-ಲಾಜಿಸ್ಟಿಕ್ ಸಂಸ್ಥೆ: ಇಂಡಿಯಾ ಪೋಸ್ಟ್ ಅನ್ನು ಪ್ರಮುಖ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್: ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ನ ಮಿತಿಯನ್ನು 3 ಲಕ್ಷದಿಂದ 5 ಲಕ್ಷ ರೂ.ಗಳಿಗೆ ಹೆಚ್ಚಸಿಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಖಾಸಗಿ ವಲಯದಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ: ನಮ್ಮ ಆರ್ಥಿಕತೆಯು ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ಬೆಳವಣಿಗೆಯ ದಾಖಲೆ ಮತ್ತು ರಚನಾತ್ಮಕ ಸುಧಾರಣೆಗಳು ಜಾಗತಿಕ ಗಮನವನ್ನು ಸೆಳೆದಿವೆ.
ಪ್ರಧಾನ ಮಂತ್ರಿ ಧನಧಾನ್ಯ ಯೋಜನೆ: ಕೃಷಿ ಬಜೆಟ್ 2025: ಪ್ರಧಾನ ಮಂತ್ರಿ ಧನಧಾನ್ಯ ಕೃಷಿ ಯೋಜನೆಯಿಂದ 1.7 ಕೋಟಿ ರೈತರಿಗೆ ಅನುಕೂಲವಾಗುತ್ತಿದೆ. ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪ್ರಮುಖ 10 ಕ್ಷೇತ್ರಗಳ ಅಭಿವೃದ್ಧಿಗಾಗಿ ಈ ಬಜೆಟ್: ಈ ಬಜೆಟ್‌ನಲ್ಲಿ ಬಡವರು, ಯುವಕರು, ರೈತರು, ಮಹಿಳೆಯರ ಅಭಿವೃದ್ಧಿ ಸೇರಿದಂತೆ ಒಟ್ಟು ಪ್ರಮುಖ 10 ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಬಜೆಟ್ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ: ಈ ಬಜೆಟ್ ದೇಶದ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು, ಒಟ್ಟಾರೆ ಅಭಿವೃದ್ಧಿಯನ್ನು ಸಾಧಿಸಲು, ಖಾಸಗಿ ವಲಯದಲ್ಲಿ ಹೂಡಿಕೆಯನ್ನು ಹೆಚ್ಚಿಸಲು, ದೇಶೀಯ ಸೂಕ್ಷ್ಮತೆಗಳನ್ನು ಬಲಪಡಿಸಲು ಮತ್ತು ಮಧ್ಯಮ ವರ್ಗದ ವೆಚ್ಚದ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ: ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಶುರು ಮಾಡುತ್ತಿದ್ದಂತೆ ಸದನದಲ್ಲಿ ವಿಪಕ್ಷ ನಾಯಕರು ಗದ್ದಲ ಎಬ್ಬಿಸಿದರು. ಈ ವೇಳೆ ಎಸ್ಪಿ ಸಂಸದರು ಸದನದಿಂದ ಹೊರನಡೆದರು.