ಮೈಸೂರು: ಕಲುಷಿತ ನೀರು ಸೇವಿಸಿ ಯುವಕನೋರ್ವ ಮೃತಪಟ್ಟಿದ್ದು, 35ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರು ತಾಲೂಕು ಜಯಪುರ ಹೋಬಳಿಯ ಕೆ.ಸಾಲುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕನಕರಾಜು (23) ಮೃತ ಯುವಕ. ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡವರನ್ನು ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಶಾಸಕ ಜಿ.ಟಿ.ದೇವೇಗೌಡ ಸ್ಥಳಕ್ಕೆ ಭೇಟಿ ನೀಡಿದ್ದು ಕಲುಸಿತ ನೀರನ್ನು ಕೂಡಲೇ ನಿಲ್ಲಿಸಿ ಶುದ್ಧನೀರು ಸರಬರಾಜು ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಇನ್ನು ಈ ದುರ್ಘಟನೆಯ ಬೆನ್ನಲ್ಲೇ ಕೆ.ಸಾಲುಂಡಿ ಗ್ರಾಮಕ್ಕೆ ಡಿಎಚ್‌ಒ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ಕಲುಷಿತ ನೀರು ಪೂರೈಕೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಗ್ರಾಮದಲ್ಲಿ ತಪಾಸಣೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಬಳಿಕ ಡಿಎಚ್‌ಒ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.
ಸದ್ಯ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕ್ರಮ ಜರುಗಿಸಲಾಗಿದೆ. ಕುಡಿಯುವ ನೀರಿನ ಬಗ್ಗೆ ಜನರು ಹೆಚ್ಚಿನ ಕಾಳಜಿ ವಹಿಸಬೇಕು. ಜತೆಗೆ ಸುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದಿಟ್ಟುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಎರಡು ಲಕ್ಷ ಪರಿಹಾರ: ಕಲುಷಿತ ನೀರು ಸೇವಿಸಿ ಮೃತಪಟ್ಟ ಕನಕರಾಜು ಮೃತ ಕುಟುಂಬಕ್ಕೆ ಮುಡಾ ಅಧ್ಯಕ್ಷ ಮರೀಗೌಡ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಈ ನಡುವೆ ಶಾಸಕ ಜಿ.ಟಿ.ದೇವೇಗೌಡ ಅವರು 1 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಮುಖ್ಯಮಂತ್ರಿಗಳು ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಇನ್ನು ಘಟನೆ ಸಂಬಂಧ ತಹಸೀಲ್ದಾರ್ ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದು, ಗ್ರಾಮಸ್ಥರಿಗೆ ಬೇಕಾದ ಆರೋಗ್ಯ ತಪಾಸಣೆಗಾಗಿ ವೈದ್ಯರ ವ್ಯವಸ್ಥೆಯನ್ನು ಮಾಡಿ ಗ್ರಾಮದ ಪ್ರತಿಯೊಬ್ಬರ ತಪಾಸಣೆಯನ್ನು ಮಾಡಲಾಗುತ್ತಿದೆ.