ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ
ರಾಯಚೂರು: ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಬರುವ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗೆ ಕಲ್ಯಾಣ ಕರ್ನಾಟಕ ವೃಂದದ 97 ಪಿಡಿಒ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಪಿಡಿಒ ಹುದ್ದೆಗಳ ನೇಮಕಾತಿಗೆ ಕಲ್ಯಾಣ ಕರ್ನಾಟಕ ಭಾಗದ 298 ಪರೀಕ್ಷಾ ಉಪ ಕೇಂದ್ರಗಳಲ್ಲಿ ಇಂದು (ನ.17) ‘ಸ್ಪರ್ಧಾತ್ಮಕ ಪರೀಕ್ಷೆ’ ಆಯೋಜನೆಗೊಂಡಿತ್ತು. ಈ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಮುಂದೆ ಪ್ರತಿಭಟಿಸಿದ್ದಾರೆ.
ಅಭ್ಯರ್ಥಿಗಳು ಆರೋಪ ಏನು?: ಒಂದು ಕೋಣೆಯಲ್ಲಿ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಆದರೆ ಕೊಠಡಿಗೆ 24 ಪ್ರಶ್ನೆಪತ್ರಿಕೆ ಬದಲು ಕೇವಲ 12 ಪ್ರಶ್ನೆಪ್ರತಿಕೆಯನ್ನು ಕೆಪಿಎಸ್‌ಸಿ ಕಳುಹಿಸಿದೆ. ಈ ಹಿನ್ನೆಲೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ಮಾತ್ರವಲ್ಲದೇ ಕೊಠಡಿಗೆ ತರುವಾಗಲೇ ಬಂಡಲ್‌ಗಳು ತೆರೆದಿದ್ದವು. ಅಷ್ಟೇ ಅಲ್ಲದೇ ಪರೀಕ್ಷೆ ನಿಗದಿಯಾದ ಸಮಯಕ್ಕಿಂತಲೂ ತಡವಾಗಿ ಆರಂಭವಾಗಿತ್ತು ಎಂದು ಆರೋಪಿಸಿದ್ದಾರೆ.
ಅಲ್ಲದೆ ಇದರಿಂದ ರೊಚ್ಚಿಗೆದ್ದ ಅಭ್ಯರ್ಥಿಗಳು ಸರ್ಕಾರಿ ಪದವಿ ಕಾಲೇಜಿನ ಎದುರಿನ ಕುಷ್ಟಗಿ – ಸಿಂಧನೂರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಬೀದರ್, ಕಲಬುರಗಿ ಹಾಗೂ ಯಾದಗಿರಿಯಿಂದ ಪರೀಕ್ಷೆ ಬರೆಯಲು ಬಂದ ಅಭ್ಯರ್ಥೀಗಳು ಪ್ರತಿಭಟನೆ ನಡೆಸಿದ್ದಾರೆ. ನೂರಾರು ಅಭ್ಯರ್ಥಿಗಳು ಕೆಪಿಎಸ್‌ಸಿ ವಿರುದ್ಧ ಪ್ರತಿಭಟಿಸುತ್ತಿದ್ದು, ಸ್ಥಳಕ್ಕೆ ಸಿಂಧನೂರು ನಗರ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲಾ ಕೇಂದ್ರಗಳು ಹಾಗೂ ಭಾಲ್ಕಿ, ಜೇವರ್ಗಿ, ಶಹಾಪುರ, ಸಿಂಧನೂರು, ಹಗರಿ ಬೊಮ್ಮನಹಳ್ಳಿ, ಕೂಡ್ಲಿಗಿ, ಗಂಗಾವತಿ ಮತ್ತು ಕುಷ್ಟಗಿ ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಭಾನುವಾರದ ಪರೀಕ್ಷೆಗೆ 99,107 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಕೆಪಿಎಸ್‌ಸಿ ತಿಳಿಸಿದೆ.