NEWSಕೃಷಿನಮ್ಮರಾಜ್ಯ

ರಾಜ್ಯದ ರೈತರಿಗೇನು ಭಿಕ್ಷೆ ನೀಡ್ತಿದ್ದೀರಾ?: ಸರ್ಕಾರದ ವಿರುದ್ಧ ಎಎಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗಣ್ಣ ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರವು ಬೆಳಗಾವಿಯಲ್ಲಿ ಡಿಸೆಂಬರ್‌ 4ರಿಂದ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದಲ್ಲಿ ಇಕ್ಕಟ್ಟಿಗೆ ಸಿಲುಕಿಕೊಳ್ಳಬಾರದು ಎಂಬ ಕಾರಣಕ್ಕೆ ತುರ್ತು ಬರ ಪರಿಹಾರವೆಂದು ಭಿಕ್ಷೆಯ ರೂಪದಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ನಾಗಣ್ಣ ರಾಜ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ 2,000 ರೂ. ಕೊಡುವುದಾಗಿ ಹೇಳಿದ್ದಾರೆ. ಆದರೆ, ಕಂದಾಯ ಸಚಿವರು 1,000 ದಿಂದ 2,000 ರೂ. ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಇವರಿಗೆ ಸ್ಪಷ್ಟತೆ ಇಲ್ಲ ಎಂದರು.

ಇಂದು ಕೆಲಸ ನಿಲ್ಲಿಸಿ ನಾಳೆ ಕೆಲಸ ಮಾಡಲು ವ್ಯವಸಾಯ ಎನ್ನುವುದು ಕೈಗಾರಿಕೆಯಂತಲ್ಲ. ಒಂದು ಚೀಲ ಯೂರಿಯಾ ಬೆಲೆ ಎಷ್ಟು ಗೊತ್ತಾ? ಮಾತೆತ್ತಿದರೆ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವಿರಿ. ಕೇಂದ್ರ ಸರ್ಕಾರಕ್ಕೂ ರೈತರ ಬಗ್ಗೆ ಕಾಳಜಿ ಇಲ್ಲ. ಎರಡೂ ಸರ್ಕಾರಗಳು ರೈತರು ಆತ್ಮಹತ್ಯೆ ಮಾಡಿಕೊಳ್ಳಲಿ ಎನ್ನುವ ಆಲೋಚನೆಯಲ್ಲಿರುವ ಹಾಗೆ ಕಾಣುತ್ತಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯನವರು ದ್ವಂದ್ವ ನೀತಿಯನ್ನು ಬಿಡಲಿ, ಬಿಜೆಪಿಯವರು ಸುಳ್ಳಲ್ಲೇ ಕೋಟೆ ಕಟ್ಟಿದವರು, ಅವರ ಗಾಳಿ ಸಿದ್ದರಾಮಯ್ಯನವರಿಗೆ ಬೀಸಿದೆಯಾ? ರಾಜ್ಯ ಸರ್ಕಾರ ನೀಡಬೇಕಾದ 17 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದರೆ ರೈತರು ಸ್ವಲ್ಪ ಉಸಿರಾಡಬಹುದು. ನೀವು ಒಂದೆರಡು ಸಾವಿರ ಕೊಟ್ಟರೆ, ಅದರಲ್ಲಿ ರೈತರು ಏನು ಮಾಡಬೇಕು. ನೀವು ಕೊಡುವ ದುಡ್ಡಿನಲ್ಲಿ ರಸಗೊಬ್ಬರ, ಬಿತ್ತನೆ ಬೀಜ, ಜಾನುವಾರುಗಳಿಗೆ ಮೇವು, ಟ್ರ್ಯಾಕ್ಟರ್ ಉಳುಮೆ ಮಾಡಿಸಲು ಆಗುತ್ತಾ?. ಈ ರೀತಿ ಒಂದೆರಡು ಸಾವಿರ ನೀಡುವ ಬದಲು ಒಟ್ಟಿಗೆ ಹಣ ನೀಡಿ ಎಂದು ಆಗ್ರಹಿಸಿದರು.

ಅಧಿವೇಶನದಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಬಾರದೆಂದು ಹಣ ಬಿಡುಗಡೆ ಮಾಡಲಾಗಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಈ ಸರ್ಕಾರ ದಿವಾಳಿ ಆಗಿದೆ ಎನ್ನುವ ಅನುಮಾನ ಬರುತ್ತಿದೆ. ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಜನರ ಮುಂದೆ ಮಾಹಿತಿ ನೀಡಲಿ. ರೈತರಿಗೆ 35,162 ಕೋಟಿ ರೂ. ನಷ್ಟವಾಗಿದೆ ಎಂದು ಸಿದ್ದರಾಮಯ್ಯನವರೇ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ 1,000 ಕೋಟಿ ಕೊಟ್ಟರೆ ಪ್ರಯೋಜನವೇನು. 14 ಬಾರಿ ಬಜೆಟ್ ಮಂಡಿಸಿರುವುದಾಗಿ ಹೇಳಿಕೊಳ್ಳುವ ಸಿಎಂ ಯಾವ ಆಧಾರದ ಮೇಲೆ ಈ ಹಣ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಒತ್ತಾಯಿಸಿದರು.

ಅಭಿವೃದ್ಧಿ ಕೆಲಸ ನಿಂತಿದೆ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಿಂತಿದೆ. ಯಾವ ಕೆಲಸಗಳು ಆಗುತ್ತಿಲ್ಲ. ರೈತರಿಗೆ 7 ಗಂಟೆ ವಿದ್ಯುತ್ ನೀಡುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರು ಎಎಪಿ ಕಾರ್ಯಕರ್ತರ ಜೊತೆ ಹಳ್ಳಿಗೆ ಬರಲಿ ಸತ್ಯ ಏನೆಂದು ತಿಳಿಯುತ್ತದೆ. ಮಾಧ್ಯಮದವರು ಬರಲಿ, 7 ಗಂಟೆ ಕರೆಂಟ್ ಕೊಡುತ್ತಿದ್ದಾರಾ ಎನ್ನುವುದು ಗೊತ್ತಾಗುತ್ತೆ ಎಂದರು.

ಸಂಸದರು ಇದ್ದೂ ಇಲ್ಲದಂತಿದ್ದಾರೆ. ಲೋಕಸಭೆಯಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಕೆಆರ್‍ಎಸ್ ಖಾಲಿಯಾಗಿದೆ, ಕುಡಿಯಲು ನಮಗೆ ನೀರಿಲ್ಲವಾದರೂ, ತಮಿಳುನಾಡಿಗೆ ನೀರು ಬಿಡಬೇಕು ಎಂದು ಆದೇಶ ಮಾಡುತ್ತಾರೆ. ತಮಿಳುನಾಡಿಗೆ ಈಗ ಉತ್ತಮ ಮಳೆಯಾಗುತ್ತಿದೆ. ಆದರೂ, ನೀರು ಬಿಡಲು ಕೇಳುತ್ತಿರುವ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ್ದೀರಾ ಎಂದು ಸಂಸದರನ್ನು ಪ್ರಶ್ನಿಸಿದರು.

ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸಿಎಂ ಸಿದ್ದರಾಮಯ್ಯ ನೇರ ಕಾರಣ. ಚುನಾವಣಾ ರಾಜಕೀಯ ಬಿಟ್ಟು ಜನರ ಕಷ್ಟಕ್ಕೆ ಸ್ಪಂದಿಸಿ. ಸರ್ಕಾರದಲ್ಲಿ ಹಣ ಇಲ್ಲದಿದ್ದರೆ ಜನರ ಮುಂದೆ ಹೇಳಿ ಜನಕ್ಕೆ ಸತ್ಯ ತಿಳಿಯಲಿ ಎಂದು ಒತ್ತಾಯಿಸಿದರು.

ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ಬೆಳೆ ನಷ್ಟ ಪರಿಹಾರದ ವಿಚಾರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲ್ಯಕ್ಷ ಖಂಡಿಸಿ, ಡಿಸೆಂಬರ್‌ 4ರಂದು ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಆಮ್‌ ಆದ್ಮಿ ಪಕ್ಷ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಇದಕ್ಕೂ ಮಣಿಯದಿದ್ದರೆ, ಎಲ್ಲಾ ಸಂಸದರು ಮತ್ತು ಕಾಂಗ್ರೆಸ್ ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದರು.

ಈ ಬಾರಿ ಅಧಿವೇಶನದಲ್ಲಿ ಹೆಚ್ಚಿನ ಸಮಯವನ್ನು ಬರದ ಬಗ್ಗೆ ಚರ್ಚೆ ಮಾಡಲು ನಿಗದಿ ಮಾಡಬೇಕು. ಆರೋಪ ಪ್ರತ್ಯಾರೋಪ ಮಾಡಲು ಅಧಿವೇಶನದ ಸಮಯ ಹಾಳು ಮಾಡಬಾರದು. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಎಂದು ಸರ್ಕಾರ ಮತ್ತು ವಿಪಕ್ಷಗಳಿಗೆ ಒತ್ತಾಯಿಸಿದರು.

ಕೇಂದ್ರ ಕೃಷಿ ಸಚಿವರು ಕಾಣೆಯಾಗಿದ್ದಾರೆ: ಕೇಂದ್ರ ಸರ್ಕಾರದ ಕೃಷಿ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ಕಳೆದ ಒಂದು ತಿಂಗಳಿನಿಂದ ದೆಹಲಿಯಿಂದ ನಾಪತ್ತೆಯಾಗಿದ್ದಾರೆ. ಬರಗಾಲ ಇದೆ, 600 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ನಾಲಾಯಕ್ ಕೇಂದ್ರ ಸಚಿವ ಮಧ್ಯ ಪ್ರದೇಶದಲ್ಲಿ ಚುನಾವಣೆಗೆ ನಿಂತು ಸೋಲುವ ಸ್ಥಿತಿಯಲ್ಲಿದ್ದಾರೆ. ಇಂತಹ ನಾಲಾಯಕ್‌ ವ್ಯಕ್ತಿಗಳನ್ನು ನರೇಂದ್ರ ಮೋದಿ ಸಚಿವರನ್ನಾಗಿ ಮಾಡಿದ್ದಾರೆ. ದೇಶದಲ್ಲಿಂದು ಕೃಷಿ ಸಚಿವನೇ ಇಲ್ಲದಂತಾಗಿದೆ. ಬಿಜೆಪಿಯವರಿಗೆ ಚುನಾವಣೆ ಗೆಲ್ಲುವುದು ಮುಖ್ಯವೇ ಹೊರತು, ಜನರ ಅಭಿವೃದ್ದಿಯಲ್ಲ ಎಂದು ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಹೇಳಿದರು.

ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಸಮಸ್ಯೆಗಳ ಬಗ್ಗೆ, ಬರಗಾಲದ ಬಗ್ಗೆ ಮಾತನಾಡಬೇಕು. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ನೀವು ಕಾರಣವಾಗುತ್ತೀರಾ ಎಂದು ಹೇಳಿದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು