ಬನ್ನೂರು: ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕು ಬನ್ನೂರು ಹೋಬಳಿಯ ತುರಗನೂರು ಗ್ರಾಮದಲ್ಲಿ ಪತಿಯೇ ಚಲನಚಿತ್ರ ನಾಯಕಿ ನಟಿಯೊಬ್ಬಳನ್ನು ಕೊಲೆ ಪರಾರಿಯಾಗಿದ್ದಾನೆ.
ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಜೊತೆ ವೇದಾ, ಭಜರಂಗಿ ಮತ್ತು ಚಿರಂಜೀವಿ ಸರ್ಜಾ ಜೊತೆ ಅಜಿತ್ ಚಿತ್ರದಲ್ಲಿ ನಟಿಸಿದ ವಿದ್ಯಾ ಅವರೆ ಕೊಲೆಯಾಗಿರುವ ನಟಿ.
ಕೌಟುಂಬಿಕ ಕಲಹ ಹಿನ್ನೆಲೆ ವಿದ್ಯಾ ಅವರ ಪತಿ ನಂದೀಶ್ ಎಂಬಾತ ಆಕೆಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳದಿಂದ ಮಾತಿಗೆ ಮಾತು ಬೆಳೆದು ಕೊನೆಗೆ ವಿದ್ಯಾ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ವಿದ್ಯಾ ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪ್ರಸ್ತುತ ವಿದ್ಯಾ ಮತ್ತು ನಂದೀಶ್‌ಗೆ ಡೈವರ್ಸ್ ಕೂಡ ಆಗಿತ್ತು ಆದರೂ ಹೊಂದಾಣಿಕೆ ಜೀವನ ಸಾಗಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದು, ಇನ್ನು ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇನ್ನು ವಿದ್ಯಾ ಮೈಸೂರಿನ ಶಿವರಾಮಪುರದಲ್ಲಿ ವಾಸವಾಗಿದ್ದು ಸೋಮವಾರವಷ್ಟೇ ತುರುಗನೂರಿಗೆ ಬಂದಿದ್ದರು. ಈ ವೇಳೆ ದಂಪತಿ ನಡುವೆ ಗಲಾಟೆ ನಡೆದು ಅದು ಹತ್ಯೆಯಲ್ಲಿ ಅಂತ್ಯವಾಗಿದೆ.
ಹತ್ಯೆ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾ ಅವರ ಅತ್ತೆ ರತ್ನಮ್ಮ ಎಂಬುವರನ್ನು ಬಂಧಿಸಿದ್ದು, ಪತಿ ನಂದೀಶ್ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ತಲೆಗೆ ಬಲವಾದ ಪೆಟ್ಟುಬಿದ್ದ ಪರಿಣಾಮ ವಿದ್ಯಾ ಸಾವು: ನಿನ್ನೆ ರಾತ್ರಿ ಮೈಸೂರಿನಿಂದ ಪತಿ ಗ್ರಾಮವಾದ ತುರುಗನೂರಿಗೆ ಹೋದ ಮೇಲೆ ವಿದ್ಯಾ ಮತ್ತು ನಂದೀಶ್ ನಡುವೆ ಜಗಳ ನಡೆದಿದೆ. ಅದು ತಾರಕಕ್ಕೇರಿ ಪತಿ ನಂದೀಶ್ ಸುತ್ತಿಗೆಯಿಂದ ವಿದ್ಯಾ ಮೇಲೆ ಹಲ್ಲೆ ಮಾಡಿದ್ದು, ತಲೆಗೆ ಬಲವಾದ ಪೆಟ್ಟುಬಿದ್ದ ಪರಿಣಾಮವಾಗಿ ಸ್ಥಳದಲ್ಲೇ ಕುಸಿದು ಬಿದ್ದ ವಿದ್ಯಾ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ವಿದ್ಯಾ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ವಿದ್ಯಾಗೆ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ಉಂಟಾಗಿತ್ತು. ಪರಸ್ಪರ ವಿಚ್ಛೇದನ ತೆಗೆದುಕೊಳ್ಳುವುದಕ್ಕೂ ಇಬ್ಬರು ಮುಂದಾಗಿದ್ದರು. ಆದರೆ ಕುಟುಂಬದ ಹಿರಿಯರು ಬುದ್ಧಿವಾದ ಹೇಳಿ ಇಬ್ಬರನ್ನು ಒಂದಾಗಿಸಿದ್ದರು.
ತನಿಖೆ ಆರಂಭಿಸಿದ ಬನ್ನೂರು ಪೊಲೀಸರು: ಬನ್ನೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ಮಾಡಿ ಹೆಚ್ಚಿನ ವಿಚಾರಣೆಗಾಗಿ ವಿದ್ಯಾ ಅತ್ತೆ ರತ್ನಮ್ಮನನ್ನು ಬಂಧಿಸಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್‌ಪಿ ಡಾ ನಂದಿನಿ, ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಅವರು ಸ್ಥಳಕ್ಕೆ ಆಗಮಿಸಿದ್ದರು.
ಹಲವು ಸಿನಿಮಾಗಳಲ್ಲಿ ನಟಿಸಿದ್ದ ವಿದ್ಯಾ: ಶಿವರಾಜ್‌ಕುಮಾರ್ ಅವರ ‘ಭಜರಂಗಿ’ ಮತ್ತು ‘ವೇದ’ ಚಿರಂಜೀವಿ ಸರ್ಜಾ ನಟನೆಯ ‘ಅಜಿತ್’, ಶರಣ್ ನಟನೆಯ ‘ಜೈ ಮಾರುತಿ 800’ ಮುಂತಾದ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ವಿದ್ಯಾ ಕಾಣಿಸಿಕೊಂಡಿದ್ದಾರೆ.
ರಾಜಕೀಯದಲ್ಲಿ ಸಕ್ರಿಯ: ನಟಿ ವಿದ್ಯಾ ನಂದೀಶ್ ಕೆಲ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದ ಅವರು, ಅದಕ್ಕೂ ಮುನ್ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.