ಬನ್ನೂರು: ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ಹಾಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವೆರಾಜ್ ನೇತೃತ್ವದಲ್ಲಿ ಕಾವೇರಿ ನೀರಾವರಿ ನಿಗಮ ಬನ್ನೂರು ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ನೂರಾರು ರೈತರು ಮನವಿ ಸಲ್ಲಿಸಿದರು.
ಇಂದು (ಫೆ.8) ಕಾವೇರಿ ನೀರಾವರಿ ನಿಗಮ ಬನ್ನೂರು ವಿಭಾಗ ರೂಪು ರೇಖಾ ಮತ್ತು ತನಿಖಾ ವಿಭಾಗ ಕಾರ್ಯಪಾಲಕ ಅಭಿಯಂತರ ವಾಸುದೇವ್ ಅವರನ್ನು ಭೇಟಿ ಮಾಡಿದ ರೈತರು ಕೃಷ್ಣರಾಜ ಸಾಗರ ಅಣೆಕಟ್ಟೆಯ ಅಚ್ಚು ಕಟ್ಟು ಭಾಗದ ನಾಲೆಗಳ ವ್ಯಾಪ್ತಿಯ ಜಮೀನಿನಲ್ಲಿ ಬೆಳೆದಿರುವ ಫಸಲು ನೀರಿಲ್ಲದೆ ಒಣಗುತ್ತಿದೆ ಹಾಗಾಗೀ ಕೂಡಲೇ ನೀರು ಬಿಡಬೇಕು ಎಂದು ಆಗ್ರಹಿಸಿದರು.
ಮುಖ್ಯವಾಗಿ ರಾಮಸ್ವಾಮಿ ನಾಲೆ, ಚಿಕ್ಕದೇವರಾಯ ನಾಲೆ, ವಿಶ್ವೇಶ್ವರಯ್ಯ ನಾಲೆಯ ತುರಗನೂರು ಶಾಖೆ ಹಾಗೂ ಉಕ್ಕಲಗೆರೆ ಉಪಶಾಖೆ ನಾಲೆಗಳು, ವಿರಿಜಾ ನಾಲೆ, ರಾಜಪರಮೇಶ್ವರಿ ನಾಲೆ, ಹಾರೋಹಳ್ಳಿ ಮೇಲ್ದಂಡೆ ನಾಲೆ ಹಾಗೂ ಮಾದವಮಂತ್ರಿ, ನಾಲೆಗಳಿಗೆ ನೀರು ಹರಿಸಿ ಹಾಲಿ ಬೆಳೆದು ನಿಂತಿರುವ ಕಬ್ಬು, ಅಡಿಕೆ, ತೆಂಗು, ಬಾಳೆ ಹಾಗೂ ತರಕಾರಿ ಇತ್ಯಾದಿ ಬೆಳೆಗಳು ಬೇಸಿಗೆ ಬಿಸಿಲಿನ ತಾಪ ತಾಳಲಾರದೆ ಒಣಗಿ ಹಾಳಾಗುತ್ತಿದ್ದು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಇನ್ನು ನಾಲೆಗಳ ಮುಖಾಂತರ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಿ, ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಗೂ ಬೆಳೆದು ನಿಂತಿರುವ ಬೆಳೆಗಳನ್ನು ರಕ್ಷಿಸಲು ತಾವು ತುರ್ತಾಗಿ ಅಚ್ಚು ಕಟ್ಟು ಭಾಗದ ಈ ಎಲ್ಲ ನಾಲೆಗಳಿಗೂ ನೀರು ಹರಿಸಬೇಕು ಎಂದು ಮನವಿ ಮಾಡಿದರು.
ಕೆರೆ ಕಟ್ಟೆಗಳು ನೀರಿಲ್ಲದೆ ಒಣಗುತ್ತಿದ್ದು ಅಂತರ್ ಜಲ ಕುಸಿದಿದೆ. ಕೃಷಿ ಪಂಪ್ ಸೆಟ್‌ಗಳಿಗೆ ನೀರು ಸಾಲದೆ ಬೆಳೆದು ನಿಂತಿರುವ ಬೆಳೆಗಳು ಒಣಗಿ ಹೋಗುತ್ತಿರುವುದರಿಂದ ತುರ್ತಾಗಿ ನಾಲೆಗಳಿಗೆ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಿ ಬೆಳೆಗಳ ರಕ್ಷಣೆ ಮಾಡಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಕಾರ್ಯಪಾಲಕ ಅಭಿಯಂತರ ವಾಸುದೇವ್ ಮಾತನಾಡಿ, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ನೀರು ಹರಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ರೈತ ಮುಖಂಡರಿಗೆ ಭರವಸೆ ನೀಡಿದರು.
ಇನ್ನು ಮೈಸೂರಿನಲ್ಲಿರುವ ಕಾವೇರಿ ನೀರಾವರಿ ನಿಗಮ ದಕ್ಷಿಣ ವಲಯ ಮುಖ್ಯ ಇಂಜಿನಿಯರ್ ವೆಂಕಟೇಶ್ ಅವರನ್ನು ಭೇಟಿ ಮಾಡಿ ಒಣಗುತ್ತಿರುವ ಫಸಲುಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ವೆಂಕಟೇಶ್ ಅವರು ಸಕರಾತ್ಮಕವಾಗಿ ಸ್ಪಂದಿಸಿ ಈ ಸಂಬಂಧ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು ಎಂದು ಅತ್ತಹಳ್ಳಿ ದೇವರಾಜ್ ತಿಳಿಸಿದರು.
ರೈತ ಮುಖಂಡರಾದ ಹೆಗ್ಗೂರು ರಂಗರಾಜು, ಬನ್ನೂರು ಸೂರಿ, ಬನ್ನೂರು ರಾಜಾನಂದ, ಬನ್ನೂರು ಶ್ರೀನಿವಾಸ್, ಕುಂತನಹಳ್ಳಿ ಕುಳ್ಳಣ್ಣ ಮತ್ತಿತರರು ಇದ್ದರು.