ತಿ.ನರಸೀಪುರ: ಬನ್ನೂರು ಪುರಸಭೆ ಅಧಿಕಾರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಎನ್‌ಡಿಎ ಮೈತ್ರಿಕೂಟ ಯಶಸ್ವಿಯಾಗಿದ್ದು, ನೂತನ ಅಧ್ಯಕ್ಷರಾಗಿ ಜೆಡಿಎಸ್‌ನ ಕೃಷ್ಣೇಗೌಡ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿಯ ನಾಗರತ್ನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷೆ ಭಾಗ್ಯಶ್ರೀ ಹಾಗೂ ಉಪಾಧ್ಯಕ್ಷೆ ಎಸ್.ಭಾಗ್ಯ ಅವರು ತಮ್ಮ ಅಧಿಕಾರ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು.
ಹಿಂದುಳಿದ ವರ್ಗ ‘ಬಿ’ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಕೃಷ್ಣೇಗೌಡ ಹಾಗೂ ಬಿಸಿಎ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ನಾನಕ್ಕೆ ಬಿಜೆಪಿಯ ನಾಗರತ್ನ ಈ ಇಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಘೋಷಿಸಿದರು.
ಪುರಸಭೆಯ ಒಟ್ಟು 23 ಸದಸ್ಯರ ಪೈಕಿ 22 ಮಂದಿ ಚುನಾವಣೆಯಲ್ಲಿ ಭಾಗ ವಹಿಸಿದ್ದರು. ಬಿ.ಎಸ್.ಶೃತಿ ಗೈರಾಗಿದ್ದರು. ಅವಿರೋಧ ಆಯ್ಕೆಯಾಗುತ್ತಿದ್ದಂತೆಯೇ ಪುರಸಭೆ ಎದುರು ಜಮಾಯಿಸಿದ್ದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ಕೃಷ್ಣೇಗೌಡ ಅವರಿಗೆ ಜೆಡಿಎಸ್ ಕಾರ್ಯಕರ್ತರು ಮೂಸಂಬಿ ಹಾರ ಹಾಕಿ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಕೃಷ್ಣೇಗೌಡ, ಸದಸ್ಯರು ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಪುರಸಭೆ ಏಳಿಗೆಗೆ ಶಕ್ತಿಮೀರಿ ಶ್ರಮಿಸುವ ಮೂಲಕ ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿ ಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಪಟ್ಟಣದ ಎಲ್ಲ ವಾರ್ಡ್‌ನ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಾದರಿ ಪುರಸಭೆ ಮಾಡಲು ಶ್ರಮಿಸುತ್ತೇನೆ ಎಂದರು.
ಮಾದರಿ ಪುರಸಭೆ ಮಾಡಲು ಶ್ರಮಿಸಿ: ಮಾಜಿ ಶಾಸಕ ಅಶ್ವಿನ್ ಕುಮಾರ್ ಮಾತನಾಡಿ, ಜೆಡಿಎಸ್-ಬಿಜೆಪಿ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿ ಎನ್‌ಡಿಎ ಮೈತ್ರಿ ಸುಭದ್ರಗೊಳಿಸಲು ಮತ್ತು ಬನ್ನೂರು ಪುರಸಭೆ ಆಡಳಿತ ಯಂತ್ರ ಸರಿಪಡಿಸಲು ನಮ್ಮ ಅಭ್ಯರ್ಥಿಗಳಿಗೆ ಅಧಿಕಾರ ನೀಡಿದ್ದಾರೆ.
ಎರಡೂ ಪಕ್ಷದ ಅಭ್ಯರ್ಥಿಗಳು ಯಾವುದೇ ಆಮಿಷಕ್ಕೆ ಒಳಗಾಗದೇ ಪ್ರಾಮಾಣಿಕವಾಗಿ ಮೈತ್ರಿಕೂಟಕ್ಕೆ ಜಯ ನೀಡಿದ್ದಾರೆ. ಪುರಸಭೆಯಲ್ಲಿ 14 ತಿಂಗಳ ಅವಕಾಶ ಸಿಕ್ಕಿದೆ. ಸಿಕ್ಕಿರುವ ಅವಕಾಶವನ್ನು ನೂತನ ಅಧ್ಯಕ್ಷ-ಉಪಾಧ್ಯಕ್ಷರು ಸದ್ಬಳಕೆ ಮಾಡಿ ಕೊಳ್ಳುವ ಮೂಲಕ ಪುರಸಭೆಯನ್ನು ಮಾದರಿ ಪುರಸಭೆ ಮಾಡಲು ಶ್ರಮವಹಿಸಬೇಕೆಂದು ಸಲಹೆ ನೀಡಿದರು.
ಮೈಸೂರು ಜಿಲ್ಲೆಗೆ ಪ್ರಥಮ: ಮೈಸೂರು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಬನ್ನೂರು ಪುರಸಭೆಯಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕೈಬಲ ಪಡಿಸಲು ಇದು ಮೊದಲ ಹೆಜ್ಜೆಯಾಗಿದೆ. ಇನ್ನು ಮುಂದೆ ನಡೆಯುವ ಚುನಾವಣೆಗಳಲ್ಲಿ ಬಿಜೆಪಿ ಜೆಡಿಎಸ್‌ಗೆ ಜಯವಾಗಲಿದೆ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಎಲ್. ಆರ್.ಮಹದೇವಸ್ವಾಮಿ ತಿಳಿಸಿದರು.
ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದೆ. ಭಾರತದ ಸರ್ವ ತೋಮುಖ ಅಭಿವೃದ್ಧಿಗಾಗಿ, ಸುಭದ್ರ, ಶ್ರೇಷ್ಠ ಹಾಗೂ ವಿಕಸಿತ ಭಾರತಕ್ಕಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದಲ್ಲಿ ಮೈತ್ರಿಕೂಟದ ಕಾರ್ಯಕರ್ತರು ಪಕ್ಷ ಸಂಘಟಿಸುತ್ತಿದ್ದಾರೆ. ಅಲ್ಲದೇ ಜನರ ಹಿತರಕ್ಷಣೆ ಗಾಗಿ ಕೆಲಸ ಮಾಡಲಾಗುತ್ತಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಒಡೆಯರ್ ತಿಳಿಸಿದರು.
ಇನ್ನು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ನಾವೆಲ್ಲರೂ ವಿಕಸಿತ ಭಾರತಕ್ಕಾಗಿ ಕೆಲಸ ಮಾಡುತ್ತಿದ್ದೇವೆ, ಬಿಜೆಪಿ-ಜೆಡಿಎಸ್ ಕೈ ಜೋಡಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಮುಂದೆಯೂ ಇದೇ ರೀತಿ ಒಗ್ಗಟ್ಟಿನಿಂದ ಕೆಲಸ ಮಾಡಲು ಎಲ್ಲರೂ ಮುಂದಾಗಬೇಕಿದೆ. ಬನ್ನೂರು ಹಾಗೂ ನಮ್ಮ ಮನೆಗೂ ಯಾವಾಗಲೂ ಉತ್ತಮ ಸಂಬಂಧವಿದೆ. ಈ ಸಂಬಂಧದ ಮೂಲಕ ಒಳ್ಳೆಯ ಕೆಲಸ ಮಾಡಬೇಕು. ಬದುಕುವ ಸ್ಥಿತಿ ಉತ್ತಮಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ನಿಕಟಪೂರ್ವ ಅಧ್ಯಕ್ಷೆ ಭಾಗ್ಯಶ್ರೀ, ಉಪಾಧ್ಯಕ್ಷೆ ಎಸ್.ಭಾಗ್ಯ, ಸದಸ್ಯರಾದ ಎಂ.ಕೆ.ಮಹೇಶ್, ಬಿ.ಕೆ.ಆನಂದ್. ಎಂ.ಆರ್.ಸೌಮ್ಯರಾಣಿ, ನಂಜುಂಡಸ್ವಾಮಿ, ಬಿ.ಆರ್.ಶ್ರೀನಿವಾಸ್, ಅನಂತ ಮೂರ್ತಿ, ಶೋಭಾ, ದಿವ್ಯ, ಫಿರ್ದೋಸ್, ಫೀರ್ ಖಾನ್, ಬಿ.ಎಸ್.ಲೋಕಾಂಬಿಕ, ಪುಷ್ಪವತಿ, ಮೂರ್ತಿ, ಬಿ.ಕೆ.ಶಾಂತರಾಜು, ಶಿವಣ್ಣ, ಚೆಲುವರಾಜು, ಸಿ.ಎಚ್.ವಿಜಯ ಕುಮಾರ್, ಸಿ.ಸಿ.ಸುರೇಶ್.
ಟೌನ್ ಅಧ್ಯಕ್ಷ ಪ್ರಭಾಕರ್, ಜೆಡಿಎಸ್ ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಒಕ್ಕಲಿಗರ ಸಮಾಜದ ಹಿರಿಯ ಮುಖಂಡ ವೈ.ಎಸ್.ರಾಮ ಸ್ವಾಮಿ, ಮಾಜಿ ಜಿಪಂ ಸದಸ್ಯ ಜೈಪಾಲ್ ಭರಣಿ, ಟಿಎಪಿಎಂಎಸ್ ನಿರ್ದೇಶಕ ಪಿ.ವಾಸುದೇವ್, ಜಿಲ್ಲಾ ಉಪಾಧ್ಯಕ್ಷ ರಾಮ ಚಂದ್ರ, ಬಿ.ಎನ್.ಸುರೇಶ್, ಹೋಬಳಿ ಅಧ್ಯಕ್ಷ ಕುಮಾರಸ್ವಾಮಿ, ಕಾಳೇಗೌಡ, ಯುವ ಮುಖಂಡ ರವಿ, ಪೈಲ್ವಾನ್ ಚಂದ್ರು, ಕಿಟ್ಟಪ್ಪ, ರಮೇಶಣ್ಣ, ತಿಮ್ಮೇಗೌಡ್ರು, ದೇವೇಗೌಡ್ರು, ಶಿವಕುಮಾರ್, ಜೈರಾಮ, ದೇವರಾಜು, ಮಾಜಿ ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ಶಿವು, ಪೈಲ್ವಾನ್ ನಿಂಗಪ್ಪ, ಪೈಲ್ವಾನ್ ವೆಂಕಟೇಶ್ ಮತ್ತಿತರರಿದ್ದರು.