ಬೆಂಗಳೂರು: ಬೆಂಗಳೂರಿನ ರಸ್ತೆಗಳು ಪರಲೋಕದ ದಾರಿಗಳಾಗಿ ಬದಲಾಗಿರುವುದು ಬಿಜೆಪಿ ಭ್ರಷ್ಟೋತ್ಸವದ ಪರಿಣಾಮದಿಂದ. ರಸ್ತೆ ಗುಂಡಿಗೆ ಆಗಿರುವ ಸಾವುಗಳೆಲ್ಲವೂ ಸರಕಾರವೇ ಮಾಡಿದ ಕೊಲೆಯಲ್ಲವೇ, ಪರಿಹಾರ ನೀಡಬೇಕಲ್ಲವೇ ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ಗಳನ್ನು ಮಾಡಿರುವ ಕಾಂಗ್ರೆಸ್, ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಪೈಪೋಟಿ ಏಕಿದೆ ಎಂಬುದಕ್ಕೆ ಉತ್ತರ-ಕಮಿಷನ್.
ರಾಜ್ಯದ ಜನರ ಬೆವರಿನ ಹಣ ಬಿಜೆಪಿಯ ತಿಜೋರಿ ಸೇರುತ್ತಿದೆ. ಬಿಬಿಎಂಪಿ ಗುತ್ತಿಗೆದಾರರ ಕಮಿಷನ್ 40 ಪರ್ಸೆಂಟ್ನಿಂದ 50 ಪರ್ಸೆಂಟ್ ಏರಿಕೆಯಾಗಿದೆ, ರಸ್ತೆಗುಂಡಿಗಳಿಗೆ ಬಲಿಯಾಗುವವರ ಸಂಖ್ಯೆಯೂ ಏರುತ್ತಿದೆ ಎಂದು ತಿಳಿಸಿದೆ.
ಬೆಲೆ ಏರಿಕೆಯಾದಂತೆ ಬಿಜೆಪಿಯ ಕಮಿಷನ್ ಕೂಡ ಏರಿಕೆಯಾಗುತ್ತಿದೆ. 40 ಪರ್ಸೆಂಟ್ ಇಂದ 50 ಪರ್ಸೆಂಟ್. ಬೆಂಗಳೂರಿನ ರಸ್ತೆಯಲ್ಲಿ ಗುಂಡಿಗಳು ಯಾಕಾಗಿವೆ, ಕಾಮಗಾರಿಗಳ ವಿಳಂಬ ಯಾಕಾಗ್ತಿದೆ ಎಂಬುದಕ್ಕೆ ಉತ್ತರ-ಕಮಿಷನ್ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಮಿಷನ್ ಕಾಟದಿಂದ ಬೇಸತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘ ಸಿಎಂಗೆ ಪತ್ರ ಬರೆದಿದೆ.
ಕಮಿಷನ್ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮಗೆ ಸಂತೋಷ್ ಪಾಟೀಲ್ರಂತೆ ಇನ್ನೆಷ್ಟು ಬಲಿ ಬೇಕು? 40 ಪರ್ಸೆಂಟ್ ಸರಕಾರದ ಬಿಜೆಪಿ ಭ್ರಷ್ಟೋತ್ಸವ ನಿಲ್ಲುವುದು ಯಾವಾಗ? ಎಂದು ಕಾಂಗ್ರೆಸ್ ಕೇಳಿದೆ.
500 ಅಮಿಷವೊಡ್ಡಿ ಸಾವರ್ಕರ್ ಯಾತ್ರೆಗೆ ಕರೆತಂದ ತಮ್ಮದೇ ಕಾರ್ಯಕರ್ತರಿಗೆ 60 ಪರ್ಸೆಂಟ್ ಕಮಿಷನ್ ಕಡಿತಗೊಳಿಸಿ 200 ರೂ.ಮಾತ್ರ ನೀಡಿದೆ.
ಮಠಗಳಿಂದ 30 ಪರ್ಸೆಂಟ್, ಗುತ್ತಿಗೆದಾರರಿಂದ 40 ಪರ್ಸೆಂಟ್, ತನ್ನದೇ ಕಾರ್ಯಕರ್ತರಿಂದ 60 ಪರ್ಸೆಂಟ್. ರಾಜ್ಯ ಬಿಜೆಪಿ ಎಲ್ಲೂ ತನ್ನ ಕಮಿಷನ್ ಲೂಟಿಯನ್ನು ಬಿಡುವುದಿಲ್ಲ, ತನ್ನದೇ ಪಕ್ಷದ ಬಡ ಕಾರ್ಯಕರ್ತರಿಂದಲೂ ಸಹ ಎಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿಯ ರಾಜ್ಯಸಭಾ ಸದಸ್ಯರೇ ತಮ್ಮದೇ ಸರಕಾರದ ಅಸಾಮರ್ಥ್ಯವನ್ನು, ಗೃಹಸಚಿವರ ಹೊಣೆಗೇಡಿತನವನ್ನು ಬಹಿರಂಗಪಡಿಸಿದ್ದಾರೆ. ಜಗ್ಗೇಶ್ ಅವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಿಜೆಪಿ ಸರಕಾರದಿಂದ ಸಾಧ್ಯವಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದು ಅಭಿನಂದನಾರ್ಹ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.