BMTC 4ನೇ ಘಟಕ: ಮಳೆಗೆ ಸೋರುತ್ತಿದೆ ಬಸ್ ಮಾಳಿಗೆ – ಆದರೂ ದೂರೇ ಬಂದಿಲ್ಲವಂತೆ!!
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಹಲವು ಬಸ್‌ಗಳ ಮೇಲ್ಛಾವಣಿಗಳು ಮಳೆಗೆ ಸೋರುತ್ತಿದ್ದು ಅದೇ ಬಸ್‌ಗಳನ್ನು ರೂಟ್ ಮೇಲೆ ಕಾರ್ಯಚರಣೆ ಮಾಡಲಾಗುತ್ತಿದೆ.
ಶನಿವಾರ ಸಂಜೆ ಬಂದ ಮಳೆಗೆ ಬಿಎಂಟಿಸಿ ಜಯನಗರ 4ನೇ ಘಟಕದ ಬಸ್ (KA57 F4046) ಕೆಂಗೇರಿ- ಬನಶಂಕರಿ ನಡುವೆ ಕಾರ್ಯಚರಣೆ ಮಾಡುತ್ತಿತ್ತು. ಈ ವೇಳೆ ರಾತ್ರಿ ಮಳೆ ಬಂದಿದ್ದು, ಬಸ್‌ನ ಚಾಲಕರ ಭಾಗದ ಅಂದರೆ ಬಸ್ ಬಲಭಾಗದಲ್ಲಿ ಮಳೆಗೆ ಸೋರುತ್ತಿತ್ತು. ಇನ್ನು ಎಡಭಾಗದ ಅಲ್ಲಲ್ಲಿ ಸೋರುತ್ತಿತ್ತು.
ಈ ಬಸ್‌ನಲ್ಲಿ ಶನಿವಾರ ಜೂ.1ರ ರಾತ್ರಿ 9.30ರಲ್ಲಿ ಪ್ರಯಾಣಿಕರೊಬ್ಬರು ಬಸ್ ಹತ್ತಿ ಟಿಕೆಟ್ ಪಡೆದುಕೊಂಡಿದ್ದಾರೆ. ಬಳಿಕ ಬಲಭಾಗದ ಸೀಟ್‌ನಲ್ಲಿ ಕುಳಿತುಕೊಳ್ಳುವುದಕ್ಕೆ ಹೋಗಿದ್ದಾರೆ. ಆದರೆ ಆ ವೇಳೆಗಾಗಲೇ ಬಲಭಾಗದ ಬಹುಕ ಎಲ್ಲ ಸೀಟ್‌ಗಳು ಮಳೆಯ ನೀರಿನಿಂದ ತೊಯ್ದೋಗಿದ್ದವು. ಇದರಿಂದ ಬಸ್ ಹತ್ತಿದ ಬಹುತೇಕ ಪ್ರಯಾಣಿಕರು ಕೂರಲಾದೆ ನಿಂತುಕೊಂಡೆ ಪ್ರಯಾಣ ಮಾಡಿದರು.
ಇನ್ನು ಮಳೆಗಾಲದಲ್ಲಿ ಬಸ್‌ಗಳು ಸೋರದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಈಗಾಗಲೇ ಬಹುತೇಕ ಎಲ್ಲ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಭದ್ರತಾ ಮತ್ತು ಜಾಗ್ರತಾಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೂ ಇಂಥ ಬಸ್‌ಗಳನ್ನು ಅಧಿಕಾರಿಗಳು ಕಾರ್ಯಚರಣೆ ಮಾಡಿಸುತ್ತಿರುವುದು ಏಕೆ. ಅಂದರೆ ಮೇಲಧಿಕಾರಿಗಳು ಮಾಡಿರುವ ಆದೇಶಕ್ಕೆ ಕಿಮ್ಮತ್ತಿಲ್ಲವೇ ಎಂಬ ಪ್ರಶ್ನೆ ಮೂಡುವಂತಿದೆ.
ಇನ್ನು ಜಯನಗರ ಘಟಕ – 4ರ ಘಟಕ ವ್ಯವಸ್ಥಾಪಕರು ರಜೆ ಮೇಲಿದ್ದಾರೆ. ಹೀಗಾಗಿ ಘಟಕದ ಉಸ್ತುವಾರಿ ವಹಿಸಿಕೊಂಡಿರುವ ಎಟಿಎಸ್ ಅವರನ್ನು ವಿಜಯಪಥ ವರದಿಗಾರು ಫೋನ್ ಮೂಲಕ ಸಂಪರ್ಕಿಸಿದಾಗ ಅವರು ತಾಂತ್ರಿಕ ಸಿಬ್ಬಂದಿಗೆ ಫೋನ್ ಕನೆಕ್ಟ್ ಮಾಡಿದರು. ಈ ವೇಳೆ ಮಾತನಾಡಿದ ಯಾಂತ್ರಿಕ ಮೇಲ್ವಿಚಾರಕರೊಬ್ಬರು (Mechanical Supervisor) ಚಾಲಕರು ಈ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ತಿಳಿಸಿದರು.
ಇನ್ನು ನೀವು ಹೇಳಿದ ಮೇಲೆ ನಮಗೆ ಗೊತ್ತಾಗಿದೆ ಬಿಸಿಲು ಬಂದ ಕೂಡಲೇ ರೂಫ್ ಲೀಕೇಜ್ ಆಗದಂತೆ ಮಾಡುತ್ತೇವೆ ಎಂದು ಹೇಳಿದರು. ಇನ್ನು ಈವರೆಗೂ ಬೇಸಿಗೆ ಬಿಸಿಲು ಇದ್ದಿದ್ದರಿಂದ ಬಸ್ ಮೇಲ್ಛಾವಣಿ ಸೋರುತ್ತದೆ ಎಂಬುವುದು ಗೊತ್ತಾಗಿಲ್ಲ ಎಂದು ವಿವರಣೆ ನೀಡಿದರು.
ಇನ್ನು ಇಂದು ಸ್ವಲ್ಪ ಬಿಸಿಲು ಸರಿಯಾಗಿಲ್ಲ ಬಂದಿಲ್ಲದ ಕಾರಣ ಟಾರ್‌ಶೀಟ್ ಹಾಕಿದರೆ ಅದು ಸರಿಯಾಗಿ ಕೂರುವುದಿಲ್ಲ. ಹೀಗಾಗಿ ಬಿಸಿಲು ಚೆನ್ನಾಗಿ ಬಂದ ಕೂಡಲೇ ರೂಫ್‌ಟಾಪ್ ದುರಸ್ತಿ ಮಾಡುತ್ತೇವೆ. ಜತೆಗೆ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ತಿಳಿಸಿದರು.
ಇನ್ನಾರು ತಿಂಗಳುಗಳ ಕಾಲ ಯಾವಾಗಬೇಕಾದರೂ ಮಳೆಯಾಗಬಹುದು. ಈ ವೇಳೆ ಸಾರಿಗೆ ನಿಗಮದ ಬಸ್‌ಗಳು ಸೋರುತ್ತಿರುವುದು ಕಂಡು ಬಂದರೆ ಕೂಡಲೇ ಪ್ರಯಾಣಿಕರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತನ್ನಿ. ನಮಗೆ ಮೇಲಧಿಕಾರಿಗಳು ಗೊತ್ತಿಲ್ಲ ಎಂದಾದರೆ ಯಾವುದೇ ಮಾಧ್ಯಮ ಮಿತ್ರರ ಗಮನಕ್ಕೆ ಈ ವಿಷಯ ತಂದರೂ ಆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಬಸ್‌ಗಳನ್ನು ಸುಸ್ಥಿತಿಯಲ್ಲಿ ಇಡಲು ಮಾಧ್ಯಮ ಮಿತ್ರರು ಸಹಕರಿಸುತ್ತಾರೆ. ಅದರಲ್ಲೂ ವಿಜಯಪಥ ವರದಿಗಾರರು ಈ ಬಗ್ಗೆ ಶೀಘ್ರ ಸ್ಪಂದಿಸುತ್ತಾರೆ ಎಂದು ಹೇಳಲು ಖುಷಿಪಡುತ್ತೇವೆ.
ಇನ್ನು ಚಾಲಕರು ದೂರು ನೀಡಿದರೆ ಆ ಬಗ್ಗೆ ಕೆಲವು ಡಿಪೋಗಳ ಅಧಿಕಾರಿಗಳು ಚಾಲಕರನ್ನೇ ಹೊಣೆಗಾರರನ್ನಾಗಿ ಮಾಡಿ ಜಾರಿಕೊಳ್ಳುವುದಕ್ಕೆ ನೋಡುತ್ತಾರೆ. ಹೀಗಾಗಿ ಮೇಲಧಿಕಾರಿಗಳ ಗಮನಕ್ಕೆ ತರುವುದಕ್ಕೆ ಚಾಲಕರು ಭಯಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಪ್ರಯಾಣಿಕರೆ ಗಮನಕ್ಕೆ ತರುವುದು ಒಳಿತು.