BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರಿಗೆ ಕಿರುಕುಳ ಕೊಡುತ್ತಿರುವ ಸಿಟಿಎಂ
ಬೆಂಗಳೂರು: ಚಿಕ್ಕಲ್ಲಸಂದ್ರ – ಕೆಂಪೇಗೌಡ ಬಸ್ ನಿಲ್ದಾಣದ ನಡುವೆ ಸಂಚರಿಸುವ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಹುತೇಕ ಎಲ್ಲ ಬಸ್‌ಗಳ ಸಮಯವನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿರುವುದರಿಂದ ಪೂರ್ಣ ಸುತ್ತುವಳಿ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರಿಂದ ಚಿಕ್ಕಲ್ಲಸಂದ್ರ ಬಸ್ ನಿಲ್ದಾಣದ ಸಮೀಪದಲ್ಲಿ ಮೆಡಿಕಲ್‌ಸ್ಟೋರ್ ಇಟ್ಟುಕೊಂಡಿರುವ ಸಮಾಜ ಸೇವಕನೆಂದು ಹೇಳಿಕೊಳ್ಳುವ ವ್ಯಕ್ತಿ ಮಹೇಶ್ ಎಂಬುವರು ಈ ಪೂರ್ಣ ಸುತ್ತುವಳಿ ಮಾಡದ ಬಸ್‌ಗಳ ನಂಬರ್‌ಗಳನ್ನು ಬರೆದುಕೊಂಡು ಬಳಿಕ ಸಂಬಂಧಪಟ್ಟ ಮುಖ್ಯ ಸಂಚಾರ ವ್ಯವಸ್ಥಾಪಕರ (ಸಿಟಿಎಂ) ಗಮನಕ್ಕೆ ತರುತ್ತಿದ್ದಾರೆ.
ಸಿಟಿಎಂ ಅವರು ಮಹೇಶ್ ಅವರು ಮಾಹಿತಿ ಕೊಟ್ಟ ಕೂಡಲೇ ಡ್ಯೂಟಿ ಮೇಲಿರುವ ತನಿಖಾ ಸಿಬ್ಬಂದಿಗಳನ್ನು ಕೂಡಲೇ ತಪಾಸಣೆ ಮಾಡುವಂತೆ ತಾಕೀತು ಮಾಡುತ್ತಿದ್ದಾರೆ. ಆದರೆ ಈವರೆಗೂ ಚಾಲನಾ ಸಿಬ್ಬಂದಿಗಳು ಏಕೆ ಪೂರ್ಣ ಸುತ್ತುವಳಿ ಮಾಡಲು ಆಗುತ್ತಿಲ್ಲ ಎಂಬ ಬಗ್ಗೆ ಗಮನವನ್ನೇ ಹರಿಸಿಲ್ಲ. ಇದು ನೌಕರರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸುತ್ತಿದೆ.
ಇಲ್ಲಿ ಮೆಡಿಕಲ್ ಮಹೇಶ್ ಅವರು ಮಾಡುತ್ತಿರುವ ಆರೋಪದ ಬಗ್ಗೆ ಚಕಾರವಿಲ್ಲ. ಆದರೆ, ಈ ರೀತಿ ಆಗುತ್ತಿರುವುದಕ್ಕೆ ಕಾರಣ ಏನು ಎಂದು ಮಹೇಶ್ ಅವರು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಕಾರಣ ಚಾಲನಾ ಸಿಬ್ಬಂದಿಗಳು ಬರಿ ಹರಟೆ ಹೊಡೆದುಕೊಂಡೋ ಅಥವಾ ಬೇಕಾಬಿಟ್ಟಿಯಾಗಿ ಡ್ಯೂಟಿ ಮಾಡುವುದಕ್ಕೆ ಬಂದಿರುವುದಿಲ್ಲ. ಅವರು ಕೂಡ ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಿರುತ್ತಾರೆ ಎಂಬುದನ್ನು ಅರಿಯಬೇಕು. ಅದನ್ನು ಬಿಟ್ಟು ಈ ರೀತಿ ಏಕ ಮುಖವಾಗಿ ತೀರ್ಮಾನ ಮಾಡುವುದು, ತಪ್ಪು ಸಂದೇಶ ಕಳುಹಿಸುವುದರಿಂದ ನೌಕರರಿಗೂ ಸಮಸ್ಯೆ ಆಗುತ್ತಿದೆ.
ಇಲ್ಲಿ ನೋಡಿ ಚಿಕ್ಕಲ್ಲಸಂದ್ರದಿಂದ ಕೆಂಪೇಗೌಡ ಬಸ್ ನಿಲ್ದಾಣದ ನಡುವೆ ಬೆಳಗ್ಗೆ 5 ಗಂಟೆಯಿಂದಲೇ ಸಂಚರಿಸುವ ಸುಮಾರು 20 ಬಸ್‌ಗಳ ಟೈಮಿಂಗ್ ಬದಲಾವಣೆ ಆಗಿರುತ್ತದೆ. ಉದಾ: ಬೆಳಗ್ಗೆ 5 ರಿಂದ 12ಗಂಟೆ ನಡುವೆ ಚಿಕ್ಕಲ್ಲಸಂದ್ರದಿಂದ ಹೊರಟು ಕೆಂಪೇಗೌಡ ಬಸ್ ನಿಲ್ದಾಣ ತಲುವುದಕ್ಕೆ 1ಗಂಟೆ 15 ನಿಮಿಷ ಸಮಯ ನಿಗದಿ ಮಾಡಲಾಗಿದೆ.
ಅದರಂತೆ ಮತ್ತೆ ಕೆಂಪೇಗೌಡ ಬಸ್‌ನಿಲ್ದಾಣದಿಂದ ಚಿಕ್ಕಲ್ಲಸಂದ್ರಕ್ಕೆ ಬರುವ ಬಸ್‌ಗಳ ಟೈಮಿಂಗ್ ಕೂಡ ಇದೇ 1ಗಂಟೆ 15 ನಿಮಿಷಗಳನ್ನು ನಿಗದಿ ಮಾಡಲಾಗಿದೆ. ಆದರೆ, ಬೆಳಗ್ಗೆ 5ರಿಂದ ಮಧ್ಯಾಹ್ನ 12 ಗಂಟೆಯೊಳಗಡೆ ಸಂಚರಿಸುವ ಬಸ್‌ಗಳ ಟೈಮಿಂಗ್‌ಅನ್ನು 1ಗಂಟೆ 15 ನಿಮಿಷದ ಬದಲಿಗೆ 1ಗಂಟೆ ಕೊಟ್ಟರೆ ಸಾಕು.
ಬಳಿಕ ಮಧ್ಯಾಹ್ನ 12ಗಂಟೆ ನಂತರ ಸಂಚರಿಸುವ ಬಸ್‌ಗಳ ಟೈಮಿಂಗ್‌ಗನ್ನು ಕೇವಲ ಒಂದು ಗಂಟೆಗೆ ಇಳಿಸಿದ್ದಾರೆ. ಆದರೆ, ಈ ಸಮಯದಲ್ಲಿ ಕೆಂಪೇಗೌಡ ಬಸ್ ನಿಲ್ದಾಣದ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಹೀಗಾಗಿ ಕೊಟ್ಟಿರುವ 1 ಗಂಟೆ ಸಮಯದ ಬದಲಿಗೆ 1ಗಂಟೆ 20 ನಿಮಿಷವಾದರೂ ಸಮಯ ಬೇಕಾಗುತ್ತದೆ.
ಹೀಗಾಗಿ ಬೆಳಗ್ಗೆ 1 ಗಂಟೆ 15 ನಿಮಿಷ ಕೊಟ್ಟಿರುವ ಸಮಯವನ್ನು 1ಗಂಟೆಗೆ ಇಳಿಸಿ ಮಧ್ಯಾಹ್ನದ ನಂತರ ಅಂದರೆ 12 ಗಂಟೆ ಬಳಿಕ 1ಗಂಟೆ 20 ನಿಮಿಷ ಸಮಯ ಕೊಟ್ಟರೆ ಎಲ್ಲ 20 ಬಸ್‌ಗಳು ಕೂಡ ಪೂರ್ಣ ಸುತ್ತುವಳಿ ಮಾಡುತ್ತವೆ. ( ಇಲ್ಲಿ 2ನೇ ಪಾಳಿ ಡ್ಯೂಟಿ ಮಾಡುವವರ ಸುತ್ತುವಳಿಯನ್ನು ಕಡಿಮೆ ಮಾಡವುದು ಅತ್ಯಾವಶ್ಯ.) ಆದರೆ ಈ ರೀತಿ ಮಾಡದೆ ಸಂಚಾರ ದಟ್ಟಣೆ ಇಲ್ಲದ ವೇಳೆ 1.ಗಂಟೆ 15 ನಿಮಿಷ ಸಮಯಕೊಟ್ಟು ಸಂಚಾರ ದಟ್ಟಣೆ ಉಂಟಾಗುವ ಸಮಯದಲ್ಲೇ 15 ನಿಮಿಷ ಕಡಿತ ಮಾಡಿ 1ಗಂಟೆ ಸಮಯ ಕೊಟ್ಟಿರುವುದರಿಂದ ಡ್ಯೂಟಿ ಮಾಡುವುದಕ್ಕೆ ಚಾಲನಾ ಸಿಬ್ಬಂದಿಗಳಿಗೆ ಸಮಸ್ಯೆಯಾಗುತ್ತಿದೆ.
ಈ ವೇಳೆ ಚಿಕ್ಕಲ್ಲಸಂದ್ರದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ, ಕೆಂಪೇಗೌಡ ಬಸ್ ನಿಲ್ದಾಣದಿಂದ ಚಿಕ್ಕಲ್ಲಸಂದ್ರಕ್ಕೂ ಬರುವ ಬಸ್‌ಗಳು ಸಂಚಾರ ದಟ್ಟಣೆಯಲ್ಲಿ ಸಿಲುಕುವುದರಿಂದ 2ನೇ ಪಾಳಿಯ ಕರ್ತವ್ಯಕ್ಕೆ ನಿಯೋಜನೆ ಗೊಂಡಿರುವ ಚಾಲನಾ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ವಾಹನಗಳನ್ನು ಬಿಟ್ಟುಕೊಡುವುದಕ್ಕೆ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದರೆ ಮಧ್ಯಾಹ್ನ ಸುಮಾರು 1.30 ಗಂಟೆಯಿಂದ ರಿಲೀವ್ ಆಗಬೇಕಿರುವ ಬಸ್‌ಗಳನ್ನು ಮಧ್ಯಾಹ್ನ 2 ಗಂಟೆ ನಂತರವೂ 2 ಗಂಟೆ ನಂತರ ರಿಲೀವ್ ಮಾಡಬೇಕಿರುವ ಬಸ್‌ಗಳು ಸುಮಾರು 3ಗಂಟೆ ವರೆಗೂ ರಿಲೀವ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ 2ನೇ ಪಾಳಿ ಡ್ಯೂಟಿ ಮಾಡುವ ನೌಕರರಿಗೂ ಸಮಸ್ಯೆಯಾಗಿತ್ತಿದೆ. ಇತ್ತ ಮೊದಲನೇ ಪಾಳಿಯ ನೌಕರರು ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಹೀಗಾಗಿ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಇರುವುದರ ಬಗ್ಗೆ ಪರಿಶೀಲಿಸಿ ವರದರಿಯನ್ನು ಕೂಡ ಕೆಲ ಘಟಕಗಳ ಅಧಿಕಾರಿಗಳು ತರಿಸಿಕೊಂಡು ಮೇಲಧಿಕಾರಿಗಳಿಗೆ ವಿವರಿಸಿದ್ದಾರೆ. ಆದರೂ ಆ ವರದಿಯ ಬಗ್ಗೆ ಗಮನಹರಿಸದ ಅಧಿಕಾರಿಗಳು ಈ ರೀತಿ ನೌಕರರ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ಇದೆಲ್ಲದರ ಅರಿವಿಲ್ಲದ ಮೆಡಿಕಲ್ ಮಹೇಶ್ ಚಾಲನಾ ಸಿಬ್ಬಂದಿಗಳ ವಿರುದ್ಧ ದೂರುಗಳ ಸರಮಾಲೆಯನ್ನೇ ದಿನಬೆಳಗಾದರೆ ನಿಷ್ಠಾವಂತರಂತೆ ಪೋಣಿಸುತ್ತಿದ್ದಾರೆ.
ಈ ಬಿಎಂಟಿಸಿ ನೌಕರರ ವಿರುದ್ಧ ಮಾಡುವ ಆರೋಪಗಳ ಬದಲಿಗೆ ಆಗುತ್ತಿರುವ ಸಮಸ್ಯೆಗಳನ್ನು ಇವರೇ ಖದ್ದಾಗಿ ಬಸ್‌ನಲ್ಲಿ ಸಂಚರಿಸುವ ಮೂಲಕ ಪರಿಶೀಲಿಸಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಆಗುತ್ತಿರುವ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಸರಿಪಡಿಸಬಹುದಿತ್ತು. ಆದರೆ ಆ ಕೆಲಸ ಮಾಡದೆ ಕಳೆದ ಹತ್ತಾರೂ ವರ್ಷಗಳಿಂದಲೂ ನೌಕರರ ವಿರುದ್ಧವೇ ದೂರು ನೀಡುತ್ತಾ ಏನೋ ಸಾಧನೆ ಮಾಡಿದ್ದೀವೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.
ಇನ್ನಾದರೂ ಮೆಡಿಕಲ್ ಮಹೇಶ್ ಅವರು ಈ ಬಗ್ಗೆ ಗಮನಹರಿಸಿ ಸತ್ಯಾಸತ್ಯತೆ ತಿಳಿದುಕೊಂಡು ಚಾಲನಾ ಸಿಬ್ಬಂದಿಗಳ ವಿರುದ್ಧ ದೂರುಕೊಟ್ಟರೆ ಅದಕ್ಕೊಂದು ಗೌರವವು ಇರುತ್ತದೆ. ಇನ್ನು ಮುಖ್ಯವಾದ ವಿಷಯ ಒಂದಿದೆ, ಚಾಲನಾ ಸಿಬ್ಬಂದಿಗಳು ಚಿಕ್ಕಲ್ಲಸಂದ್ರ ಬಸ್ ನಿಲ್ದಾಣಕ್ಕೆ ಬಂದು ಬೆಳಗ್ಗಿನ ಉಪಾಹಾರ ಸೇವನೆ ಮಾಡುವುದಕ್ಕೆಂದೆ ಸಂಸ್ಥೆಯಿಂದಲೇ ಸಮಯ ನಿಗದಿ ಮಾಡಿದ್ದಾರೆ.
ಆದರೆ ಈ ಮಹೇಶ್ ಸಿಬ್ಬಂದಿಗಳು ಡ್ಯೂಟಿ ಮಾಡಿಕೊಂಡು ಬಂದು ಉಪಾಹಾರ ಸೇವನೆ ಮಾಡುವುದಕ್ಕೆ ಕುಳಿತರೆ ಅವರನ್ನು ಏಕವಚನದ ಪದಪ್ರಯೋಗ ಮಾಡಿ ಇಲ್ಲಿ ತಿನ್ನಬೇಡಿ ಕೆಂಪೇಗೌಡ ಬಸ್‌ನಿಲ್ದಾಣದಲ್ಲಿ ತಿನ್ನಿ ಎಂದು ಗದರಿಸುತ್ತಾರೆ. ಜತೆಗೆ ನಿಲ್ದಾಣಾಧಿಕಾರಿಯವರನ್ನು ಏಕವಚನದಲ್ಲೆ ಕರೆದು ಚಾಲಕ ಮತ್ತು ನಿರ್ವಾಹಕರನ್ನು ಬೇಗ ಕಳುಹಿಸದಿದ್ದರೆ ಪರಿಣಾಮವನ್ನು ಎದುರಿಸುತ್ತೀಯಾ ಜೋಕೆ ಎಂದು ಬೆದರಿಸುತ್ತಾರೆ ಎಂಬ ಆರೋಪವು ಇದೆ.
ಚಾಲನಾ ಸಿಬ್ಬಂದಿಗಳು ದುಡಿಯುತ್ತಿರುವುದು ಹೊತ್ತಿನ ಊಟಕ್ಕಾಗಿಯೇ ಆದರೆ, ಈ ಮಹೇಶ್ ಊಟ ಮಾಡುವುದಕ್ಕೂ ಬಿಡುವುದಿಲ್ಲ ಎಂದರೆ ಯಾವ ಪುರುಷಾರ್ಥಕ್ಕಾಗಿ ನೌಕರರು ದುಡಿಯಬೇಕು ಅಲ್ವಾ. ಇನ್ನಾದರೂ ಸಾರಿಗೆ ನೌಕರರ ಬಗ್ಗೆ ಗೌರವದಿಂದ ಮಾತನಾಡುವುದನ್ನು ಮಹೇಶ್ ಅವರು ಕಲಿತುಕೊಂಡರೆ ಒಳ್ಳೆಯದು.