ಬೆಂಗಳೂರು: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರು ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಗುರುವಾರ ಬಸ್‌ಗಳನ್ನು ಡಿಪೋದಿಂದ ಹೊರಕ್ಕೆ ತೆಗೆಯದೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಆದರೆ ನಮಗೆ ಸರಿಯಾಗಿ ತಿಂಗಳಿಗೆ ವೇತನ ಆಗುತ್ತಿಲ್ಲ. ಜತೆಗೆ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಕಂಪನಿ ಮತ್ತು ಸಂಸ್ಥೆ ವಿಫಲವಾಗಿದೆ ಎಂದು ಆರೋಪಿಸಿ ಜಮಾಯಿಸಿರುವ ಚಾಲಕರು ನಮಗೆ ಕೊಡುತ್ತಿರುವ ವೇತನ ಸಾಲುತ್ತಿಲ್ಲ, ಹೀಗಿದ್ದರೂ ತಿಂಗಳಿಗೆ ಸರಿಯಾಗಿ ಸಂಬಳ ಪಾವತಿಸದೆ ಅಸಡ್ಡೆ ತೋರುತ್ತಿದ್ದಾರೆ ಎಂದು ಪ್ರತಿಭನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಸರಿಯದ ಸಮಯಕ್ಕೆ ವೇತನ ಪಾವತಿಯಾಗಬೇಕು ಇದರ ಜತೆಗೆ ಮೆಡಿಕಲ್ ಸೌಲಭ್ಯವನ್ನೂ ಒದಗಿಸಬೇಕು ಎಂಬುವುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದೇವೆ, ನಮ್ಮಲ್ಲಿರುವ ಕೆಲ ಸಮಸ್ಯೆಗಳನ್ನು ಹೇಳಿಕೊಂಡರು ಯಾರು ಸ್ಪಂದಿಸುತ್ತಿಲ್ಲ. ಹೀಗಾಗಿ ನಮ್ಮ ಈ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಪಟ್ಟು ಹಿಡಿದು ಬಸ್‌ಅನ್ನು ಘಟಕಗಳಿಂದ ಹೊರ ತೆಗೆಯದೇ ಹೋರಾಟ ಮಾಡುತ್ತಿದ್ದಾರೆ.
ಯಶವಂತಪುರ ಹಾಗೂ ಕೆ.ಆರ್.ಪುರಂ ಡಿಪೋಗಳಲ್ಲಿ 70ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಕಾರ್ಯಾಚರಣೆಯಾಗುತ್ತಿವೆ. ಇವುಗಳಿಂದ ಸಮಾಧಾನಕರ ಎನ್ನವಷ್ಟರ ಮಟ್ಟಿಗೆ ಆದಾಯವು ಬರುತ್ತಿದೆ. ಇದರ ನಡುವೆಯೇ ಸ್ಪೋಟಕ ಮಾಹಿತಿ ಎನ್ನುವಂತೆ ಚಾಲಕರಿಗೆ ವೇತನವನ್ನೇ ನೀಡಲಾಗಿಲ್ಲ ಎಂದು ದಿಢೀರ್ ಪ್ರತಿಭಟನೆಗೆ ಇಳಿದ್ದಿದ್ದಾರೆ. ಹೀಗಾಗಿ ಎಲ್ಲ ಬಸ್‌ಗಳ ಚಾಲಕರು ಇಂದು ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸಿ ಡಿಪೋಗಳ ಮುಂದೆ ಧರಣಿ ನಡೆಸುತ್ತಿದ್ದಾರೆ.
ಎಲೆಕ್ಟ್ರಿಕ್ ಬಸ್‌ಗಳ ಕಂಪೆನಿಗೆ ಬಿಎಂಟಿಸಿ ಹಣವನ್ನು ಪಾವತಿಸಿಲ್ಲವೋ ಅಥವಾ ಬಿಎಂಟಿಸಿಗೆ ಬರುತ್ತಿರುವ ಎಲೆಕ್ಟ್ರಿಕ್ ಬಸ್‌ಗಳ ಆದಾಯ ಕಡಿಮೆಯಾಗಿದೆಯೋ ಗೊತ್ತಿಲ್ಲ, ಬಸ್‌ಗಳ ಚಾಲಕರು ತಮಗೆ ಸಂಬಳವಾಗಿಲ್ಲ ಎನ್ನುವ ಅಂಶವನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಬಿಎಂಟಿಸಿ ಆಡಳಿತಕ್ಕೆ ತೀವ್ರ ಮುಜುಗರ ಉಂಟಾಗುತ್ತಿದೆ.