BMTC & KSRTC: ಕನಿಷ್ಠ ಪಿಂಚಣಿಗಾಗಿ ಪ್ರತಿಭಟನೆ, ಸುಪ್ರೀಂ & ಹೈ ಕೋರ್ಟ್ ಆದೇಶ ಪಾಲನೆಗೆ ಒತ್ತಾಯ
ಬೆಂಗಳೂರು: ಕನಿಷ್ಠ ಪಿಂಣಿಗಾಗಿ ಈ ಇಳಿವಯಸ್ಸಿನಲ್ಲೂ ನಿರಂತ ಹೋರಾಟ ಮಾಡುತ್ತಿದ್ದರೂ ನಮ್ಮ ಬಗ್ಗೆ ಕಾನೂನಾತ್ಮಕವಾಗಿ ನಿಲ್ಲದ ಕೇಂದ್ರ ಸರ್ಕಾರ ಮತ್ತು ಅಧಿಕಾರಿಗಳಿಗೆ ನಮ್ಮ ಧಿಕ್ಕಾರ. ಇದು ನಮಗೆ ತುಂಬ ನೋವುಂಟು ಮಾಡುತ್ತಿದೆ ಎಂದು ಇಪಿಎಸ್ ನಿವೃತ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎನ್‌ಎಸಿ, ಬಿಎಂಟಿಸಿ & ಕೆಎಸ್‌ಅರ್‌ಟಿಸಿ ವತಿಯಿಂದ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನಾ ಸಭೆಗೆ ನೂರಾರು ಇಪಿಎಸ್ ನಿವೃತ್ತರು ಆಗಮಿಸಿ ಧಿಕ್ಕಾರದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ಇನ್ನು ಇಪಿಎಫ್ಒ ಅಧಿಕಾರಿಗಳು ದೇಶಾದ್ಯಂತ “ನಿಧಿ ಅಪ್ಕೆ ನಿಕಟ್” ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ಕೊಡುತ್ತಾರೆ. ನಿವೃತ್ತರು ಇಪಿಎಫ್ಒ ಕಚೇರಿಗೆ ಹಾಜರಾಗಿ ತಮ್ಮ ಎಲ್ಲ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳುತ್ತಾರೆ. ಆದರೆ ಈವರೆಗೂ ನಮ್ಮ ಯಾವುದೇ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ಕಿಡಿಕಾರಿದರು.
ಬಿಎಂಟಿಸಿ & ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ ಮಾತನಾಡಿ, ಸರ್ವೋಚ್ಚ ನ್ಯಾಯಾಲಯವು 04/11/2022 ರಂದು ಆರ್.ಸಿ. ಗುಪ್ತ ಹಾಗೂ ಸುನಿಲ್ ಕುಮಾರ್ ಎರಡು ಪ್ರಕರಣಗಳಲ್ಲಿ ನೀಡಿರುವ ತೀರ್ಪನ್ನು ಉಲ್ಲೇಖಿಸಿದ ರಾಜ್ಯ ಉಚ್ಚ ನ್ಯಾಯಾಲಯದ WP 2651/2019 ಕೆ.ಆರ್. ನಾಗರಾಜ ಹಾಗೂ ಇತರರ ಪ್ರಕರಣದಲ್ಲಿ 08/01/2024 ರಂದು ಆದೇಶ ನೀಡಿದೆ.
ಈ ಅತ್ಯುನ್ನತ ನ್ಯಾಯಾಲಯದ ಎರಡು ತೀರ್ಪುಗಳನ್ನು ಕರ್ನಾಟಕ ಹೈ ಕೋರ್ಟ್ ಉಲ್ಲೇಖಿ ಜ.8.2024ರಂದು ನೀಡಿರುವ ತೀರ್ಪಿನಲ್ಲಿ ಅರ್ಜಿದಾರರು ತಮ್ಮ ಅಹವಾಲನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಲ್ಲಿ ಸಲ್ಲಿಸಬೇಕು, ಈ ಎಲ್ಲ ಅರ್ಜಿದಾರರುಗಳಿಗೆ ಪ್ರತಿವಾದಿ ಆಯುಕ್ತರು ಕಾನೂನಾತ್ಮಕವಾಗಿ ಪರಿಗಣಿಸಿ, ಹೆಚ್ಚುವರಿ ಪಿಂಚಣಿ ನೀಡಬೇಕು ಎಂದು ಆದೇಶಿಸಲಾಗಿದೆ.
ಇಪಿಎಫ್ಒ ಅಧಿಕಾರಿಗಳು ತಮ್ಮ ಕಚೇರಿಯಿಂದ ಈ ವರವಿಗೂ ಹೊರಡಿಸಿರುವ ಸುತ್ತೋಲೆಗಳು (circulars) ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವ್ಯತಿರಿಕ್ತವಾಗಿದ್ದು ಯಾವುದೇ ಮನ್ನಣೆ ಇಲ್ಲ ಎಂದು ಹೈ ಕೋರ್ಟ್ ಸ್ಪಷ್ಟವಾಗಿ ತನ್ನ ಆದೇಶದಲ್ಲಿ ತಿಳಿಸಿದೆ. ಹೀಗಾಗಿ ನಮಗೆ ಕಾನೂನಾತ್ಮಕವಾಗಿ ಕೂಡಲೇ ನಮಗೆ ಸೌಲಭ್ಯ ಕಲ್ಪಿಸಬೇಕು ಎಂದು ನಂಜುಂಡೇಗೌ ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಡೋಲಪ್ಪನವರು, ಅಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯಸ್ಥರಾದ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ಸರ್ಕಾರದ ಜತೆ ಹಲವಾರು ಸುತ್ತಿನ ಮಾತುಕತೆ ನಡೆದಿದ್ದು, ಪಾರ್ಲಿಮೆಂಟ್ ಚುನಾವಣೆ ಘೋಷಣೆಯಾಗುವ ಮೊದಲು, ನಮ್ಮ ಎಲ್ಲ ಕನಿಷ್ಠ ಪಿಂಚಣಿ ಬೇಡಿಕೆಗಳು ಈಡೇರಲಿವೆ ಎಂಬ ಆಶಾಯ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಎನ್ಎಸಿ ಅಧ್ಯಕ್ಷ ಹುಚ್ಚಪ್ಪ ಮಾತನಾಡಿ, ನಮ್ಮ ಎಲ್ಲ ಇಪಿಎಸ್ ಸಂಘಟನೆಗಳು ಒಗ್ಗಟ್ಟಾಗಿ ಹೆಚ್ಚಿನ ಹೋರಾಟ ಮಾಡಿದಲ್ಲಿ ನಮ್ಮ ಜಯ ಶತಸಿದ್ಧ ಎಂದು ಹೇಳಿದರು.
ಉಪಾಧ್ಯಕ್ಷ ಸುಬ್ಬಣ್ಣ ಮಾತನಾಡಿ, ಕಳೆದ ಪಾರ್ಲಿಮೆಂಟ್ ಬಜೆಟ್ ಅಧಿವೇಶನ ಹಾಗೂ ಸಿಬಿಟಿ ಸಭೆಯಲ್ಲಿ ನಿವೃತ್ತರ ವಿವಿಧ ಬೇಡಿಕೆಗಳು ಈಡೇರುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಯಿತು. ಹೆಚ್ಚುವರಿ ಪಿಂಚಣಿ ಪಡೆಯಲು ನಿವೃತ್ತರ ಬಳಿ ಹಣವಿಲ್ಲ, ಶೇಕಡವಾರು 70% ನಿವೃತ್ತರು ಕನಿಷ್ಠ ಹೆಚ್ಚುವರಿ ಪಿಂಚಣಿ ಬಯಸಿದ್ದು, ಕೇಂದ್ರ ಸರ್ಕಾರ ಕಾರ್ಯ ಪ್ರವೃತ್ತರಾಗಿ ಇದನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರಿಗೆ ಉಲ್ಲೇಖಿಸಿರುವ ಮನವಿ ಪತ್ರವನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಮೂಲಕ ಸಲ್ಲಿಸಿ, ಈ ನ್ಯಾಯಾಲಯದ ತೀರ್ಪು ಹಾಗೂ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆ ಇವೆರಡನ್ನು ಕೂಡಲೇ ಈಡೇರಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನಾ ನಿರತರಿಂದ ಮನವಿ ಪತ್ರ ಸ್ವೀಕರಿಸಿದ ಅಧಿಕಾರಿಗಳು ಇಪಿಎಸ್ ನಿವೃತ್ತರ ಬಗ್ಗೆ ತಮಗೆ ಕಾಳಜಿ ಇದ್ದು, ಈ ಬಗ್ಗೆ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನಾ ಸಭೆಯ ನಿರ್ವಹಣೆಯನ್ನು ಪದಾಧಿಕಾರಿಗಳಾದ ನಾಗರಾಜು ಹಾಗೂ ರುಕ್ಮಿಶ್ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು. ಮುಸಂಜೆಯಲ್ಲಿರುವ 60ಕ್ಕೂ ಮೇಲ್ಪಟ್ಟ ನೂರಾರು ಉತ್ಸಾಹಿಗಳು ಯುವಕರನ್ನು ನಾಚಿಸುವಂತೆ ಹೋರಾಟದಲ್ಲಿ ಭಾಗವಹಿಸಿದ್ದು ಮಾತ್ರ ನೋವಿನ ಸಂಗತಿಯಾಗಿದ್ದು, ಇವರ ಹೋರಾಟಕ್ಕೆ ಸರ್ಕಾರ ಮಣಿಯದಿದ್ದರೆ ಸರ್ಕಾರ ಇದ್ದು ಇಲ್ಲದಂತೆಯೇ.