BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆನ್‌ಲೈನ್‌ನಲ್ಲಿ ರಜೆ ಹಾಕುವ (Leave Management System (LMS) ಇದೇ ನವೆಂಬರ್ 1ರಿಂದ ಕೈಕೊಟ್ಟಿದೆ. ಆದರೆ ತಾತ್ಕಾಲಿಕವಾಗಿ ಬದಲಿ ವ್ಯವಸ್ಥೆಯೊಂದನ್ನು ಮಾಡಲಾಗಿದೆ. ಅದರಲ್ಲಿ ರಜೆ ಮಂಜೂರಾಗದೆ ನೌಕರರು ಸಮಸ್ಯೆಯಲ್ಲಿ ಸಿಲುಕಿದ್ದಾರೆ.
ಈ ಸಂಬಂಧ ಬಹುತೇಕ ಎಲ್ಲ ಘಟಕ ವ್ಯವಸ್ಥಾಪಕರಿಗೂ ನೌಕರರು ದೂರು ನೀಡಿದ್ದು ಕೂಡಲೇ ಸರಿ ಪಡಿಸಿಕೊಂಡಿ ಎಂದು ಮನವಿ ಮಾಡಿದ್ದಾರೆ. ಆದರೆ, ಕಳೆದ 7 ದಿನಗಳಿಂದಲೂ ವ್ಯವಸ್ಥೆ ಸರಿಯಾಗದೆ ನೌಕರರು ರಜೆ ಪಡೆಯುವುದಕ್ಕೆ ಮರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾತ್ಕಾಲಿಕವಾಗಿ ಬಿಟ್ಟಿರುವ LMSನಲ್ಲಿ ರಜೆ ಹಾಕಲು ಹೋದರೆ ನೀವು ಕಳೆದ ತಿಂಗಳು 22 ದಿನಗಳು ಡ್ಯೂಟಿ ಮಾಡಿಲ್ಲ ಹೀಗಾಗಿ ನಿಮಗೆ ರಜೆ ಹಾಕುವುದಕ್ಕೆ ಆಗುವುದಿಲ್ಲ ನಿಮ್ಮ ಘಟಕ ವ್ಯವಸ್ಥಾಪಕರನ್ನು ಸಂಪರ್ಕಿಸಿ ಎಂದು ಬರುತ್ತಿದೆ.
ಅಂದರೆ, ಘಟಕದಲ್ಲಿ 22 ದಿನ ಕೆಲಸ ಮಾಡಿದ್ದರು ಕೂಡ ಅಕ್ಟೋಬರ್ ತಿಂಗಳ ಹಾಜರಾತಿಯನ್ನು ಫೀಡ್ ಮಾಡದೆ ಇರುವುದರಿಂದ ಈ ಸಮಸ್ಯೆ ಎದುರಾಗಿದೆ ಎಂದು ನೌಕರರು ಹೇಳುತ್ತಿದ್ದಾರೆ.
ಅಲ್ಲದೆ ಈ ಸಂಬಂಧ ಘಟಕ ವ್ಯವಸ್ಥಾಪಕರಿಗೆ ನೌಕರರು ಲಿಖಿತ ಮನವಿ ಸಲ್ಲಿಸಿದ್ದು ಹಾಜರಾತಿಯನ್ನು ಫೀಡ್ ಮಾಡದ ಹೊರತು LMSನಲ್ಲಿ ಸ್ವಯಂ ಚಾಲಿತ ರಜೆಯನ್ನು ಪಡೆಯುವುದು ಅಸಾಧ್ಯ, ಇದರಿಂದ ಹಾಜರಾತಿಯನ್ನು ಉತ್ತಮ ಪಡಿಸಿಕೊಂಡು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗಳಿಗೆ ರಜೆ ಪಡೆದುಕೊಳ್ಳಲು ಆಗುತ್ತಿಲ್ಲ.
LMS ತಂತ್ರಾಂಶದಲ್ಲಿ ಸುಧಾರಣೆ ಕಂಡು ಬಂದರೂ ತಂತ್ರಾಂಶದಲ್ಲಿ ಹಾಜರಾತಿ ಫೀಡ್ ಮಾಡದಿರುವುದು ಬೇಸರ ತಂದಿದೆ. ದಯವಿಟ್ಟು ಈ ವಿಷಯಕ್ಕೆ ಸಂಭಂದಿಸಿದಂತೆ ಪರಿಹಾರ ನೀಡಬೇಕು ಎಂದು ಜಿಗಣಿಯಲ್ಲಿರುವ ಬಿಎಂಟಿಸಿ ಘಟಕ 27ರ ನೌಕರರು ಮನವಿ ಸಲ್ಲಿಸಿದ್ದಾರೆ.
ಇನ್ನು ಇದು ಬರಿ ಜಿಗಣಿ ಘಟಕವೊಂದರ ಸಮಸ್ಯೆಯಲ್ಲ ಬಿಎಂಟಿಸಿಯ ಎಲ್ಲ ಘಟಕಗಳಲ್ಲೂ ಈ ಸಮಸ್ಯೆ ಎದುರಾಗಿದ್ದು ನೌಕರರು ತುರ್ತು ರಜೆ ಪಡೆಯುವುದಕ್ಕೂ ಪರದಾಡುವಂತಾಗಿದೆ. ಅಲ್ಲದೆ ಸಾಂದರ್ಭಿಕ ರಜೆ ಹಾಕುವುದಕ್ಕೂ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಸಂಬಂಧಪಟ್ಟ ತಾಂತ್ರಿಕ ವಿಭಾಗದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನೌಕರರಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.