Search By Date & Category

NEWSನಮ್ಮರಾಜ್ಯರಾಜಕೀಯ

ಮೋದಿ, ಶಾ ಯಾವ ಮುಖ ಇಟ್ಟುಕೊಂಡು ರಾಜ್ಯದಲ್ಲಿ ಮಾತಾಡ್ತಾರೆ: ಬ್ರಿಜೇಶ್‌ ಕಾಳಪ್ಪ ಪ್ರಶ್ನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ ಕಮಿಷನ್‌ ಪಡೆಯುತ್ತಿದ್ದಾಗ ಕೋಟ್ಯಂತರ ರೂಪಾಯಿ ಹಣದೊಂದಿಗೆ ಲೋಕಾಯುಕ್ತ ಅಧಿಕಾರಿಗಳ ಬಲಗೆ ಸಿಕ್ಕಿಬಿದ್ದಿರುವಾಗ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾವ ಮುಖ ಇಟ್ಟುಕೊಂಡು ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಾರೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ ಪ್ರಶ್ನಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬ್ರಿಜೇಶ್‌ ಕಾಳಪ್ಪ, “ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಪದೇಪದೇ ಕರ್ನಾಟಕಕ್ಕೆ ಬಂದು ಚುನಾವಣಾ ಭಾಷಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವೆಂಬಂತೆ ಮಾತನಾಡುತ್ತಿದ್ದಾರೆ. ಆದರೆ ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ, ಮಹದೇವಪುರ ಶಾಸಕ ಅರವಿಂದ್‌ ಲಿಂಬಾವಳಿ ಮತ್ತಿತರರ ವಿರುದ್ಧ ಸಾಕ್ಷಿಸಹಿತ ಕಮಿಷನ್‌ ಆರೋಪ ಕೇಳಿಬಂದಿದ್ದರೂ ಈ ಬಗ್ಗೆ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಮಾತನಾಡಿಲ್ಲ.

ಈಗ ಅವರದ್ದೇ ಪಕ್ಷದ ಮತ್ತೊಬ್ಬ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಮಗ ಕಮಿಷನ್‌ ಪಡೆಯುತ್ತಿದ್ದಾಗ ಸಾಕ್ಷಿಸಹಿತ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಬರೋಬ್ಬರಿ ಎಂಟು ಕೋಟಿ ರೂಪಾಯಿ ದಾಖಲೆಯಿಲ್ಲದ ನಗದು ಪತ್ತೆಯಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ತಾಕತ್ತಿದ್ದರೆ ಈ ಬಗ್ಗೆ ಪ್ರತಿಕ್ರಿಯಿಸಲಿ ಎಂದು ಸವಾಲು ಹಾಕಿದರು.

ಬಿಜೆಪಿ ಶಾಸಕರು ಎಂತಹದ್ದೇ ಅಕ್ರಮ ಮಾಡಿ ಸಿಕ್ಕಿಬಿದ್ದರೂ ಐಟಿ, ಇಡಿ, ಸಿಬಿಐ ಸಂಸ್ಥೆಗಳು ಅವರ ಮೇಲೆ ದಾಳಿ ಮಾಡಿಲ್ಲ. ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಜನಾರ್ದನ ರೆಡ್ಡಿ ಕೋವಿಡ್‌ ಸಂದರ್ಭದಲ್ಲಿ ತಮ್ಮ ಮಗಳ ಮದುವೆಗೆ ಬರೋಬ್ಬರಿ 500 ಕೋಟಿ ರೂಪಾಯಿ ಖರ್ಚು ಮಾಡಿದರೂ ಈ ಸಂಸ್ಥೆಗಳು ವಿಚಾರಣೆ ನಡೆಸಲಿಲ್ಲ.

ಆದರೆ, ಆಮ್‌ ಆದ್ಮಿ ಪಾರ್ಟಿಯ ದೆಹಲಿ ಸಚಿವರಾದ ಸತ್ಯೇಂದ್ರ ಜೈನ್‌, ಮನೀಷ್‌ ಸಿಸೋಡಿಯಾ ವಿರುದ್ಧ ಸೂಕ್ತ ಸಾಕ್ಷಿಯಿಲ್ಲದಿದ್ದರೂ, ಅವರ ಮನೆಗಳಲ್ಲಿ ನಗದು ಹಾಗೂ ಅಕ್ರಮದ ದಾಖಲೆಗಳು ಪತ್ತೆಯಾಗದಿದ್ದರೂ ಬಂಧಿಸಿ ಕಿರುಕುಳ ನೀಡಲಾಗುತ್ತಿದೆ. ದೇಶಾದ್ಯಂತ ಆಮ್‌ ಆದ್ಮಿ ಪಾರ್ಟಿಗೆ ಸಿಗುತ್ತಿರುವ ಜನಬೆಂಬಲಕ್ಕೆ ಬಿಜೆಪಿಯ ಕೇಂದ್ರ ನಾಯಕರು ಎಷ್ಟು ಹೆದರಿದ್ದಾರೆ ಎಂಬುದನ್ನು ಇದರಿಂದ ತಿಳಿಯಬಹುದು ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದರು.

Leave a Reply

error: Content is protected !!