ಬೆಂಗಳೂರು: ಉಚಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವುದಾಗಿ 18 ಕೋಟಿ ರೂ. ವಂಚಿಸಿದ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಆಂಧ್ರಪ್ರದೇಶ ಮೂಲದ ಶ್ರೀನಿವಾಸುಲು ಎಂದು ಗುರುತಿಸಲಾಗಿದೆ. ಆರೋಪಿ ಡಾಟ ಸೈನ್ಸ್ ಕೋರ್ಸ್ ಮಾಡಿಸುವುದಾಗಿ ವಿದ್ಯಾರ್ಥಿಗಳಿಂದ ದಾಖಲೆಗಳನ್ನು ಪಡೆಯುತ್ತಿದ್ದ. ಬಳಿಕ ಅವುಗಳನ್ನು ಬ್ಯಾಂಕ್ನಲ್ಲಿಟ್ಟು ಲಕ್ಷಾಂತರ ರೂ. ಸಾಲ ಪಡೆಯುತ್ತಿದ್ದ ಎಂದು ಪೊಲೀಸರು ತನಿಖೆಯಿಂದ ಹೊರಬಿದ್ದಿದೆ.
ಆರೋಪಿ ಇದುವರೆಗೂ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಬ್ಯಾಂಕ್ ಸಿಬ್ಬಂದಿಯೂ ಭಾಗಿಯಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಮಾಡಿದ್ದು ಹೇಗೆ?: ಈ ಶ್ರೀನಿವಾಸುಲು ಮೊದಲಿಗೆ ಉಚಿತ ಶಿಕ್ಷಣ ಕೊಡಿಸುವ ಹೆಸರಲ್ಲಿ ಅನೇಕ ಯುವಕ ಯುವತಿಯರನ್ನು ಆಕರ್ಶಿಸಿ ತನ್ನ ಸಂಸ್ಥೆಗೆ ಸೇರಿಕೊಳ್ಳುವಂತೆ ಮಾಡುತ್ತಿದ್ದ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆಸರಲ್ಲಿ ಲೋನ್ ಪಡೆದುಕೊಂಡು “ನಾವೇ ಸಾಲವನ್ನು ಕಂತು ಕಂತಾಗಿ ತೀರಿಸುತ್ತೇವೆ” ಎಂದು ನಂಬಿಸುತ್ತಿದ್ದ.
ಆ ನಂತರ ಕೋರ್ಸ್ಗೆ ಬೇಕಾದಂತಹ ಅಗತ್ಯ ದಾಖಲೆಗಳನ್ನು ಬ್ಯಾಂಕ್ಗಳಿಗೆ ಕೊಡಿಸುತ್ತಿದ್ದ. ಆದರೆ ಹಣವನ್ನು ಮಾತ್ರ ತನ್ನ ಖಾತೆಗೆ ವರ್ಗಾವಣೆ ಆಗುವಂತೆ ಮಾಡುತ್ತಿದ್ದ. ಕಡೆಗೆ ಸಾಲವನ್ನು ತೀರಿಸದೇ ಈತ ಒಟ್ಟು 18 ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಿಸಿದ್ದಾನೆ ತಿಳಿದು ಬಂದಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕ್ರಮ ತೆಗೆದುಕೊಂಡು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.