CrimeNEWSನಮ್ಮರಾಜ್ಯ

KSRTC ಬಸ್‌ ಡಿಕ್ಕಿಯಾಗಿ ಜನರಲ್ ತಿಮ್ಮಯ್ಯ ಪ್ರತಿಮೆ ನೆಲಕ್ಕುರುಳಿದ ಪ್ರಕರಣ- ಸೆ.5ರಂದು ವಿಚಾರಣೆ

ವಿಜಯಪಥ ಸಮಗ್ರ ಸುದ್ದಿ

ಮಡಿಕೇರಿ: 2023ರ ಆಗಸ್ಟ್‌ 21ರ ಸೋಮವಾರ ಬೆಳ್ಳಂಬೆಳಗ್ಗೆ ಕೆಎಸ್‌ಆರ್‌ಟಿಸಿ (KSRTC) ಬಸ್ ಮಡಿಕೇರಿಯ ಜನರಲ್ ಕೆ.ಎಸ್‌.ತಿಮ್ಮಯ್ಯ (General Thimmaiah) ವೃತ್ತಕ್ಕೆ ಗುದ್ದಿ, ಡಿಕ್ಕಿ ಹೊಡೆದ ರಭಸಕ್ಕೆ ವೀರ ಸೇನಾನಿ ತಿಮ್ಮಯ್ಯ ಅವರ ಪ್ರತಿಮೆ ನೆಲಕ್ಕುರುಳಿ ಬಿದ್ದಿದ್ದ ಪ್ರಕರಣದ ವಿಚಾರಣೆ ಇದೇ ಸೆ.5ರಂದು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯಲಿದೆ.

ಈ ಪ್ರಕರಣದಲ್ಲಿ ಆರೋಪಿ ಚಾಲಕನ ಪರವಾಗಿ ಹಿರಿಯ ವಕೀಲ ಎಚ್‌.ಬಿ.ಶಿವರಾಜು ವಕಾಲತ್ತು ವಹಿಸಿದ್ದಾರೆ. ಅಂದು ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ 30 ಹೆಚ್ಚು ಸಾಕ್ಷಿಗಳನ್ನು ಮಡಿಕೇರಿ ಸಂಚಾರ ಪೊಲೀಸ್‌ ಠಾಣೆಯ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದ್ದು ಅಷ್ಟು ಮಂದಿಯೂ ಸಾಕ್ಷಿ ನುಡಿಯಲಿದ್ದಾರೆ.

ಕರ್ನಾಟಕ ಹೈ ಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು.

ಈವರೆಗೂ ವಕೀಲ ರಮೇಶ್‌ ಪ್ರಕರಣ ಸಂಬಂಧ ಕೋರ್ಟ್‌ ಹಾಜರಾಗುತ್ತಿದ್ದರು. ಸೆ.5ರಂದು ವಿಚಾರಣೆ ನಡೆಯುವುದರಿಂದ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

ಘಟನೆ ಏನು? 2023ರ ಆಗಸ್ಟ್‌ 21ರ ಸೋಮವಾರ ಮಂಜಿನ ನಗರಿ ಮಡಿಕೇರಿಗೆ ಕಳಸದಂತೆ ಇದ್ದ ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ನಿಯಂತ್ರಣ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಮಹಾನ್ ಸೇನಾನಿ ಪ್ರತಿಮೆ ನೆಲಕ್ಕುರುಳಿತ್ತು.

ಮಡಿಕೇರಿ ಡಿಪೋದಿಂದ ಬಸ್ ನಿಲ್ದಾಣದ ಕಡೆ ಹೊರಟಿದ್ದ ಬಸ್‌ಗೆ ಪಿಕಪ್ ವಾಹನವೊಂದು ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಬಸ್ ಜನರಲ್ ತಿಮ್ಮಯ್ಯ ಪ್ರತಿಮೆಗೆ ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ಬಸ್‌ನಲ್ಲಿ ಪ್ರಯಾಣಿಕರಿಲ್ಲದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಆದರೆ, ಚಾಲಕ ಹಾಗೂ ಕಾರ್ಯನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅಂದು ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಬಸ್ ಚಾಲಕ ಕೊಟ್ರೇಶ್‌ನನ್ನು ವಶಕ್ಕೆ ಪಡೆದರೆ ಬಸ್ ಅನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದರು.

ವೀರ ಸೇನಾನಿ ಪ್ರತಿಮೆ ನೆಲಕ್ಕೆ ಉರುಳಿದ ಸುದ್ದಿ ಕೇಳಿದ ಕೊಡಗಿನ ಜನರು, ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಸ್ ಚಾಲಕನ ಅತಿ ವೇಗದ ಚಾಲನೆಯಿಂದ ಈ ರೀತಿಯ ಘಟನೆ ನಡೆದಿದೆ ಎಂದು ಆರೋಪಿಸಿದ್ದರು.

ಅಲ್ಲದೇ ಸದ್ಯದ ಮಟ್ಟಿಗೆ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ಸ್ಥಳಾಂತರಿಸುವ ಕಾರ್ಯ ನಡೆದಿತ್ತು. ತಿಮ್ಮಯ್ಯ ವೃತ್ತದ ಕಾಮಗಾರಿ ಮುಗಿಯುವರೆಗೂ ಮ್ಯೂಸಿಯಂನಲ್ಲಿ ಇಡುವಂತೆ ಚರ್ಚೆ ನಡೆಸಿದ ಬಳಿಕ ಕ್ರೇನ್ ಮೂಲಕ ಪ್ರತಿಮೆಯನ್ನು ಮ್ಯೂಸಿಯಂಗೆ ಸ್ಥಳಾಂತರ ಮಾಡಲಾಗಿತ್ತು.

ನೂತನ ಪ್ರತಿಮೆ ಸ್ಥಾಪನೆ: ಬಳಿಕ ತಿಮ್ಮಯ್ಯ ನವರ ನೂತನ ಪ್ರತಿಮೆಯನ್ನು ಸಕಲ ಗೌರವದೊಂದಿಗೆ ಮಡಿಕೇರಿಯ ನೇಮಸೇಕ್ ವೃತ್ತದಲ್ಲಿ 2024ರ ಮಾರ್ಚ್‌ 8ರ ಶುಕ್ರವಾರದಂದು ಮರು ಸ್ಥಾಪಿಸಲಾಗಿದೆ.

ಜಿಲ್ಲಾಡಳಿತ, ನಗರಸಭೆ ಉಸ್ತುವಾರಿಯಲ್ಲಿ ನಡೆದ ಕಾರ್ಯಕ್ರದಲ್ಲಿ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಪುಷ್ಪನಮನದ ಮೂಲಕ ನಿವೃತ್ತದ ಏರ್ ಮಾರ್ಷಲ್ ನಂದಾ ಕಾರ್ಯಪ್ಪಮತ್ತು ಮಾಜಿ ಸಚಿವ ಎಂ.ಸಿ.ನಾಣಯ್ಯ ಅನಾವರಣಗೊಳಿಸಿದ್ದರು.

ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಮರು ಸ್ಥಾಪನೆ ಆದರೂ ಕಾನೂನಿನ ಪ್ರಕಾರ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಚಾಲಕನ ಪರವಾಗಿ ತೀರ್ಪು ಬರುತ್ತದೋ ಅಥವಾ ವಿರುದ್ಧವಾಗಿ ಬರುತ್ತದೋ ಎಂಬುದನ್ನು ಕಾದು ನೋಡಬೇಕಿದೆ.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ